ಬೆಂಗಳೂರು: ಕಳೆದ ಕೆಲ ದಿನಗಳಿಂದ ರಾಜ್ಯದಲ್ಲಿ ಕೋವಿಡ್-19 ಪಾಸಿಟಿವ್ ಪ್ರಕರಣಗಳು ಹೆಚ್ಚಾಗುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿ ಕಳವಳ ವ್ಯಕ್ತಪಡಿಸಿದ್ದು, ಸೋಂಕಿನ ಹರಡುವಿಕೆ ಹೆಚ್ಚಿರುವ ಕಡೆ ನಿಯಂತ್ರಣಕ್ಕೆ ವಿಶೇಷ ಕಾಳಜಿ ವಹಿಸಲು ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ್ದಾರೆ.
ಕೋವಿಡ್-19 ನಿರ್ವಹಣೆ ಕುರಿತು ಏಳು ರಾಜ್ಯಗಳ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಸಂವಾದ ನಡೆಸಿದರು. ರಾಜ್ಯದಿಂದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿಡಿಯೋ ಸಂವಾದದಲ್ಲಿ ಭಾಗಿಯಾದರು. ಈ ವೇಳೆ, ರಾಜ್ಯದ ಕೋವಿಡ್ ನಿರ್ವಹಣೆಗೆ ಮೋದಿ ಆರಂಭಿಕ ಮೆಚ್ಚುಗೆ ವ್ಯಕ್ಯಪಡಿಸಿದರೂ ರಾಜ್ಯದ 9 ಜಿಲ್ಲೆಗಳಲ್ಲಿ ಎರಡು ವಾರದಿಂದ ಕೊರೊನಾ ಸೋಂಕು ಪ್ರಮಾಣ ವ್ಯಾಪಕವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.
ಕೂಡಲೇ ಈ 9 ಜಿಲ್ಲೆಗಳಲ್ಲಿ ಕೋವಿಡ್ ಸೋಂಕು ನಿಯಂತ್ರಣಕ್ಕೆ ಕಾರ್ಯಪಡೆ ರಚಿಸಿ ನಿತ್ಯ ಅವಲೋಕನ ಮಾಡುವಂತೆ ಸೂಚನೆ ನೀಡಿದರು. ಅಲ್ಲದೇ ಆಂಟಿಜೆನ್ ಟೆಸ್ಟ್ ನಲ್ಲಿ ನೆಗಟಿವ್ ವರದಿ ಬರುವ ರೋಗಲಕ್ಷಣ ಇರುವ ವ್ಯಕ್ತಿಗಳಿಗೆ ಕಡ್ಡಾಯವಾಗಿ ಆರ್ಟಿಪಿಸಿಆರ್ ಪರೀಕ್ಷೆ ನಡೆಸುವಂತೆ ಸೂಚನೆ ನೀಡಿದರು.
ಸಭೆ ನಂತರ ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್, ಏಳು ರಾಜ್ಯದ ಮುಖ್ಯಮಂತ್ರಿಗಳ ಜೊತೆ ಪ್ರಧಾನಿ ಮೋದಿ ವಿಡಿಯೋ ಸಂವಾದ ನಡೆಸಿದರು. ಕೋವಿಡ್ ನಿಯಂತ್ರಣ, ಸಾವಿನ ಪ್ರಮಾಣ ಯಾವ ರೀತಿ ಹತೋಟಿಗೆ ತರಲಾಗಿದೆ ಎಂದು ಕೂಲಂಕಷವಾಗಿ ಎಲ್ಲ ರಾಜ್ಯಗಳ ಸಿಎಂ ಹಾಗೂ ಆರೋಗ್ಯ ಸಚಿವರ ಜೊತೆ ಸಂವಾದ ನಡೆಸಿದರು ಎಂದರು.
ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕರ್ನಾಟಕದಲ್ಲಿ ಸಾವಿನ ಪ್ರಮಾಣ ಕಡಿಮೆ ಇದೆ.ಶೇ. 1.54 ರಷ್ಟು ಮರಣ ಪ್ರಮಾಣ ಇದೆ. ಆದರೆ 9 ಜಿಲ್ಲೆಗಳಲ್ಲಿ ಸೋಂಕಿತರ ಪ್ರಮಾಣ ಕಳೆದ ಎರಡು ವಾರದಿಂದ ಹೆಚ್ಚು ದಾಖಲಾಗಿದೆ, ಇಲ್ಲಿ ವಿಶೇಷ ಯೋಜನೆ ರೂಪಿಸಿ, ಕಾರ್ಯಪಡೆ ರಚಿಸಿ ಪ್ರತಿ ದಿನ ಈ ಜಿಲ್ಲೆಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ, ಸೋಂಕು ಪ್ರಮಾಣ ಕಡಿಮೆ ಮಾಡಿ ಎಂದು ಸೂಚನೆ ನೀಡಿದ್ದಾರೆ. ಅಲ್ಲದೇ ರಾಜ್ಯ ವಿಪತ್ತು ನಿರ್ವಹಣಾ ನಿಧಿಯಲ್ಲಿ ಶೇ. 50. ರಷ್ಟು ಅನುದಾನವನ್ನು ಇನ್ನು ಮುಂದೆ ಕೋವಿಡ್ ನಿಗ್ರಹಕ್ಕೆ ಬಳಸಿಕೊಳ್ಳಲು ಅನುಮತಿ ಕೊಟ್ಟಿದ್ದಾರೆ ಇದು ರಾಜ್ಯ ಸರ್ಕಾರಕ್ಕೆ ಬಹಳ ಅನುಕೂಲವಾಗಲಿದೆ ಎಂದರು.
ಪರೀಕ್ಷಾ ಸಾಮರ್ಥ್ಯ ಹೆಚ್ಚು ಮಾಡುವಂತೆ ಸೂಚಿಸಿದ್ದಾರೆ. ಆರ್ಟಿಪಿಸಿಆರ್ ಪರೀಕ್ಷೆ ಮೂರು ಪಟ್ಟು ಹೆಚ್ಚು ಮಾಡಲು ಎಲ್ಲ ರಾಜ್ಯಕ್ಕೂ ಸೂಚನೆ ನೀಡಿದ್ದಾರೆ, ರೋಗಲಕ್ಷಣ ಇದ್ದು ಆಂಟಿಜೆನ್ ಪರೀಕ್ಷೆಯಲ್ಲಿ ವರದಿ ನೆಗಟಿವ್ ಬಂದರೆ ಆರ್.ಟಿ.ಪಿ.ಸಿ ಆರ್ ಪರೀಕ್ಷೆ ಮಾಡಲು ಹೇಳಿದ್ದಾರೆ, ನಮ ಲ್ಯಾಬ್ ಸಂಖ್ಯೆ ಮತ್ತು ಪರೀಕ್ಷೆ ಸಂಖ್ಯೆಗೆ ಪಿಎಂ ತೃಪ್ತಿ ವ್ಯಕ್ತಪಡಿಸಿದ್ದಾರೆ ಎಂದರು.
ಹೊಸ ಪದ್ದತಿ ನಾವು ರೂಢಿ ಮಾಡಿದ್ದೇವೆ, ಟಿಲಿ ಐಸಿಯು ಮಾಡುವುದಾಗಿ ಮಹಾರಾಷ್ಟ್ರ ಈಗ ಹೇಳಿದೆ, ಆದರೆ ನಾವು ಕಳೆದ ಐದು ತಿಂಗಳ ಹಿಂದೆಯೇ ಮಾಡಿದ್ದೆವು, ಇದರಲ್ಲಿ ನಾವೇ ಮೊದಲು. ನಾಗರಿಕರ ಸಹಭಾಗಿತ್ವದಲ್ಲಿ ಮಾತ್ರ ಕೊರೊನಾ ನಿಯಂತ್ರಣ ಸಾಧ್ಯ ಎಂದು ಪಿಎಂ ಹೇಳಿದ್ದಾರೆ. ಜನರಲ್ಲಿ ಜಾಗೃತಿ, ಅರಿವು ಮೂಡಿಸುವ ಕೆಲಸ ಮಾಡಬೇಕು, ಕಡ್ಡಾಯ ಮಾಸ್ಕ್ ಧರಿಸಬೇಕು, ಇದು ಜೀವನದ ಒಂದು ಭಾಗ ಆಗಬೇಕು ಎಂದು ಹೇಳಿ ಅದಕ್ಕೆ ಒತ್ತು ಕೊಡಲು ಸಲಹೆ ಕೊಟ್ಟಿದ್ದಾರೆ. ಹಬ್ಬಗಳು ಬರುತ್ತಿವೆ, ಲಸಿಕೆ ಇಲ್ಲದ ಕಾರಣ ಸಾಮಾಜಿಕ ಪ್ರಜ್ಞೆ ಮೂಡಬೇಕು ಅದರ ಮೂಲಕ ನಿಗ್ರಹ ಸಾಧ್ಯ, ನಾಗರಿಕರಲ್ಲಿ ಪ್ರಜ್ಞೆ ಹೆಚ್ಚು ಇದ್ದ ಕಡೆ ಕಡಿಮೆ ಸೋಂಕು ಇದೆ ಈ ನಿಟ್ಟಿನಲ್ಲಿ ಯೋಚಿಸಲು ಸಲಹೆ ನೀಡಿದ್ದಾರೆ ಎಂದರು.
ಸಾವಿನ ಪ್ರಮಾಣ ಜೂನ್ ಜುಲೈ ನಲ್ಲಿ ಶೇ. 2.8-2.3 ಇದ್ದಿದ್ದು, ಇಂದು ಶೇ. 1.45 ಕ್ಕೆ ಬಂದಿದೆ, ಸೋಂಕಿತರ ಪ್ರಮಾಣ 7-8.ಸಾವಿರ ಇರುವುದ ಬೇಸರ ತರಿಸಿದೆ, ಪಾಸಿಟಿವ್ ಪ್ರಮಾಣ ಕಡಿತಕ್ಕೆ ಎಲ್ಲ ರೀತಿಯ ಪ್ರಯತ್ನ ನಡೆಸುವುದಾಗಿ ಸುಧಾಕರ್ ತಿಳಿಸಿದರು.