ಬೆಂಗಳೂರು:ಇಂದು ವಿಶ್ವದ ಅತಿ ದೊಡ್ಡ ಲಸಿಕೆ ಅಭಿಯಾನ ನಡೆಯಲಿದೆ. ಈ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಬೆಳಗ್ಗೆ 10:30ಕ್ಕೆ ದೆಹಲಿಯಲ್ಲಿ ವರ್ಚುವಲ್ ಮೂಲಕ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯದ ಎರಡು ವ್ಯಾಕ್ಸಿನೇಷನ್ ಕೇಂದ್ರಗಳಿಗೂ ಚಾಲನೆ ಸಿಗಲಿದೆ.
ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆ ಮತ್ತು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯ ಲಸಿಕಾ ಕೇಂದ್ರಗಳು ವಿತರಣೆಗೆ ಸಜ್ಜಾಗುತ್ತಿವೆ. ನಿನ್ನೆ ವಿಕ್ಟೋರಿಯಾ ವ್ಯಾಕ್ಸಿನೇಷನ್ ಸೆಂಟರ್ಗೆ ಬಿಬಿಎಂಪಿ ವಿಶೇಷ ಆಯುಕ್ತ ರಾಜೇಂದ್ರ ಚೋಳನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪರಿಶೀಲನೆ ಬಳಿಕ ಮಾತನಾಡಿದ ಅವರು, ಗ್ರೂಪ್ ಡಿ ನೌಕರರು, ವೈದ್ಯರು, ನರ್ಸ್ಗಳು. ಹೀಗೆ ಆರೋಗ್ಯ ಕಾರ್ಯಕರ್ತರು ಯಾರು ನೋಂದಣಿ ಮಾಡಿಕೊಂಡಿದ್ದಾರೋ ಅವರಲ್ಲಿ ಶನಿವಾರದಂದು 100 ಜನರಿಗೆ ಲಸಿಕೆ ನೀಡಲಾಗುತ್ತದೆ ಎಂದರು.
ಇಂದಿನಿಂದ ಕೋವ್ಯಾಕ್ಸಿನ್, ಕೋವಿಶೀಲ್ಡ್ ಲಸಿಕೆ ವಿತರಣೆ...
ರಾಜ್ಯದಲ್ಲಿ ಮೊದಲ ಹಂತದಲ್ಲಿ 16 ಲಕ್ಷ ಜನ ಕೊರೊನಾ ವಾರಿಯರ್ಸ್ಗೆ ಇಂದಿನಿಂದ ಕೊರೊನಾ ಲಸಿಕೆ ನೀಡಲಾಗುತ್ತದೆ ಎಂದು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.
ದೇಶದಲ್ಲಿ ಮೂರು ಕೋಟಿ ಜನರಿಗೆ ಮೊದಲ ಹಂತದಲ್ಲಿ ಲಸಿಕೆ ನೀಡಲಾಗುತ್ತದೆ. ಕರ್ನಾಟಕದಲ್ಲಿ ಜನವರಿ 16 ರಿಂದ 16 ಲಕ್ಷ ಫ್ರಂಟ್ ಲೈನ್ ವಾರಿಯರ್ಸ್ಗೆ ಲಸಿಕೆ ನೀಡಲಾಗುತ್ತದೆ. ಅದಾದ 28 ದಿನದ ನಂತರ ಎರಡನೇ ಡೋಸೇಜ್ ನೀಡಲಾಗುತ್ತದೆ. ಒಟ್ಟು 235 ಕೇಂದ್ರಗಳಲ್ಲಿ ವ್ಯಾಕ್ಸಿನೇಷನ್ ನೀಡಲಾಗುತ್ತದೆ. ಕೋವಿಶೀಲ್ಡ್ ಹಾಗೂ ಕೋವ್ಯಾಕ್ಸಿನ್ ಎರಡನ್ನೂ ಹಂಚಿಕೆ ಮಾಡಲಾಗುತ್ತದೆ ಎಂದರು.
ಮೊದಲಿಗೆ ಗ್ರೂಪ್ ಡಿ ನೌಕರರು, ಸಫಾಯಿ ಕರ್ಮಚಾರಿಗಳಿಗೆ ಲಸಿಕೆ...
ಪ್ರಧಾನಿ ಮೋದಿ ಇಂದು ಬೆಳಗ್ಗೆ 10.30ಕ್ಕೆ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕರ್ನಾಟಕದಲ್ಲಿ 243 ಹಾಗೂ ಬೆಂಗಳೂರಿನ 10 ಕೇಂದ್ರಗಳಲ್ಲಿ ಲಸಿಕೆ ನೀಡಲಾಗುತ್ತಿದೆ. ಬೆಂಗಳೂರು ಮೆಡಿಕಲ್ ಕಾಲೇಜಿನಲ್ಲಿ ಸಿಎಂ ಯಡಿಯೂರಪ್ಪ ಚಾಲನೆ ನೀಡಲಿದ್ದಾರೆ.
ಆರೋಗ್ಯ ಇಲಾಖೆಯ ಗ್ರೂಪ್ ಡಿ ನೌಕರರು ಮತ್ತು ಸಫಾಯಿ ಕರ್ಮಚಾರಿಗಳಿಗೆ ಇಂದು ಸಾಂಕೇತಿಕವಾಗಿ ಮೊದಲು ಲಸಿಕೆ ನೀಡಲಾಗುತ್ತದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಮಾಹಿತಿ ನೀಡಿದ್ದಾರೆ.
ರಾಜ್ಯದಲ್ಲಿ ಒಟ್ಟು 7.17 ಲಕ್ಷ ಮಂದಿ ಈಗ ನೋಂದಣಿ ಆಗಿದ್ದಾರೆ. ಸದ್ಯ ನಮಗೆ 8.14 ಲಕ್ಷ ಲಸಿಕೆಗಳು ಕೇಂದ್ರದಿಂದ ಬಂದಿವೆ. ಪ್ರತಿ ಕೇಂದ್ರದಲ್ಲಿ100 ಮಂದಿಗೆ ಲಸಿಕೆ ನೀಡಲಾಗುವುದು. ಒಂದು ವಾರದಲ್ಲಿ ನೋಂದಣಿಯಾಗಿರುವ ಫ್ರಂಟ್ ಲೈನ್ ವಾರಿಯರ್ಸ್ಗೆ ಲಸಿಕೆ ನೀಡುವ ಕಾರ್ಯಕ್ರಮವನ್ನು ಪೂರ್ಣಗೊಳಿಸುವ ವಿಶ್ವಾಸ ಇದೆ ಎಂದು ಸಚಿವ ಸುಧಾಕರ್ ಶುಕ್ರವಾರ ಹೇಳಿದರು.