ಬೆಂಗಳೂರು : ರಾಜ್ಯ ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭರ್ಜರಿ ರೋಡ್ ಶೋ ನಡೆಸಿದ್ದು, ನೆಚ್ಚಿನ ನಾಯಕನಿಗೆ ಪುಷ್ಪವೃಷ್ಟಿಗೈಯುವ ಮೂಲಕ ಕ್ಷೇತ್ರದ ಜನತೆ ಸ್ವಾಗತಿಸಿದರು. ಈ ವೇಳೆ ಮೋದಿ ಪರ ಜಯಘೋಷಗಳನ್ನು ಮೊಳಗಿಸಿದರು. ಅಪಾರ ಜನಸ್ತೋಮದತ್ತ ಕೈಬೀಸುತ್ತಲೇ ಮೋದಿ ಮೋಡಿ ಮಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಆರು ದಿನಗಳ ರಾಜ್ಯ ಪ್ರವಾಸದ ಅಂಗವಾಗಿ ಮೊದಲ ದಿನದ ರಾಜ್ಯ ಪ್ರವಾಸ ಬೆಂಗಳೂರಿನ ರೋಡ್ ಶೋ ಮೂಲಕ ಇಂದು ಮುಕ್ತಾಯಗೊಂಡಿತು. ಸಂಜೆ 6.15ಕ್ಕೆ ನಗರದ ತುಮಕೂರು ರಸ್ತೆಯಲ್ಲಿರುವ ನೈಸ್ ರಸ್ತೆ ಜಂಕ್ಷನ್ ಗೆ ಆಗಮಿಸಿದ ಮೋದಿ, ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು. ಉತ್ತರ ಲೋಕಸಭಾ ಕ್ಷೇತ್ರದ ಸಂಸದ ಡಿವಿ ಸದಾನಂದಗೌಡ ಹಾಗು ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣಸ್ವಾಮಿ ಮಾತ್ರ ಮೋದಿ ಜೊತೆ ತೆರೆದ ವಾಹನದಲ್ಲಿ ಉಪಸ್ಥಿತರಿದ್ದರು.
ನೈಸ್ ರೋಡ್ ಜಂಕ್ಷನ್ ನಿಂದ ಆರಂಭಗೊಂಡ ರೋಡ್ ಶೋ ಸುಮನಹಳ್ಳಿ ಸರ್ಕಲ್ವರೆಗೂ ಸಾಗಿತು. ರಸ್ತೆಯುದ್ದಕ್ಕೂ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ಮೋದಿಗೆ ಜೈಕಾರ ಹಾಕಿತು. ಮೋದಿಯತ್ತ ಪುಷ್ಪವೃಷ್ಟಿ ಸುರಿಸಿ ಅದ್ಧೂರಿ ಸ್ವಾಗತ ಕೋರಿದರು. ನೆರೆದಿದ್ದ ಕಾರ್ಯಕರ್ತರು ಅಭಿಮಾನಿಗಳತ್ತ ಕೈಬೀಸಿದ ಮೋದಿ ಮಂದಹಾಸದೊಂದಿಗೆ ರೋಡ್ ಶೋ ನಡೆಸಿದರು. ರಸ್ತೆಯ ಎರಡೂ ಕಡೆಯಲ್ಲಿಯೂ ಜನರು ಮೋದಿಗೆ ಜೈಕಾರ ಕೂಗುತ್ತ ಹೆಜ್ಜೆ ಹಾಕಿದರು.
ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಯಶವಂತಪುರ, ಆರ್.ಆರ್. ನಗರ, ದಾಸರಹಳ್ಳಿ, ಮಹಾಲಕ್ಷ್ಮಿ ಲೇಔಟ್ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಈ ರೋಡ್ ಶೋ ನಡೆದಿದ್ದು, ಯಶವಂತಪುರ, ಆರ್.ಆರ್. ನಗರ, ಮಲ್ಲೇಶ್ವರ, ಪುಲಕೇಶಿನಗರ, ಯಲಹಂಕ, ದಾಸರಹಳ್ಳಿ, ಬ್ಯಾಟರಾಯನಪುರ, ಮಹಾಲಕ್ಷ್ಮಿ ಲೇಔಟ್, ಹೆಬ್ಬಾಳ ವಿಧಾನಸಭಾ ಕ್ಷೇತ್ರಗಳಿಂದ ಕಾರ್ಯಕರ್ತರು ರೋಡ್ ಶೋ ವೀಕ್ಷಿಸಲು ಆಗಮಿಸಿದ್ದರು.