ಕರ್ನಾಟಕ

karnataka

By

Published : Dec 11, 2021, 6:07 PM IST

ETV Bharat / state

ಡಿ.13ರಂದು ದಿವ್ಯ ಕಾಶಿ ಭವ್ಯ ಕಾಶಿ ಉದ್ಘಾಟನೆ : ಎನ್.ರವಿಕುಮಾರ್​​ ಮಾಹಿತಿ

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಪ್ರಧಾನಿ ಮೋದಿಯವರು ಡಿಸೆಂಬರ್​​ 13ರಂದು ದಿವ್ಯ ಕಾಶಿ ಭವ್ಯ ಕಾಶಿ ಉದ್ಘಾಟನೆ ಮಾಡಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ..

Ravikumar pressmeet
ರವಿಕುಮಾರ್​​ ಪತ್ರಿಕಾಗೋಷ್ಠಿ

ಬೆಂಗಳೂರು :ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಾಶಿ ವಿಶ್ವನಾಥ ಕ್ಷೇತ್ರದ ಪುನರುಜ್ಜೀವನಕ್ಕಾಗಿ ಕೈಗೊಂಡ ನಿರ್ಣಯ ಕಾಶಿ ವಿಶ್ವನಾಥ ಧಾಮದ ರೂಪ ಪಡೆದಿದೆ. ಅದೀಗ ಡಿಸೆಂಬರ್ 13ರಂದು ಉದ್ಘಾಟನೆಗೊಳ್ಳಲಿದೆ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ್ ತಿಳಿಸಿದರು.

ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಶಿ ಅತ್ಯಂತ ಪ್ರಾಚೀನ ಮತ್ತು ಪೌರಾಣಿಕ ನಗರವಾಗಿದೆ. ಇದು ಗಂಗಾ ಮಾತೆಯ ದಡದಲ್ಲಿದೆ. ಇದು ಭಗವಾನ್ ಶಿವನ ಶಿರದಿಂದ ಹುಟ್ಟಿಕೊಂಡಿದೆ. ಇದು ಪವಿತ್ರ ಸಪ್ತಪುರಿಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ.

ಈ ಮಹಾನ್ ನಗರದ ಕುರಿತು ಋಗ್ವೇದ, ಸ್ಕಂದ ಪುರಾಣ, ರಾಮಾಯಣ ಮತ್ತು ಮಹಾಭಾರತ ಮತ್ತು ಮತ್ಸ್ಯ ಪುರಾಣ ಸೇರಿದಂತೆ ಅನೇಕ ಗ್ರಂಥಗಳಲ್ಲಿ ಉಲ್ಲೇಖ ಕಂಡು ಬರುತ್ತದೆ. ಪ್ರಧಾನಮಂತ್ರಿ ನರೇಂದ್ರ ಮೋದಿ ದಿವ್ಯ ಕಾಶಿ, ಭವ್ಯ ಕಾಶಿಯ ಕನಸನ್ನು ನನಸು ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಧರ್ಮಾಚಾರ್ಯರು ಸೇರಿದಂತೆ ಹೆಚ್ಚಿನ ಸಂಖ್ಯೆಯ ಭಕ್ತರು, ಸಾಧು-ಸಂತರು, ಬುದ್ಧಿಜೀವಿಗಳು, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು, ಉಪ ಮುಖ್ಯಮಂತ್ರಿಗಳು, ಉತ್ತರಪ್ರದೇಶದ ಮುಖ್ಯಮಂತ್ರಿಗಳು, ಕೇಂದ್ರ ಸಚಿವರು ಮತ್ತು ಸಚಿವರು ಕಾಶಿಯಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ನೇರವಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮ ವಿಶಿಷ್ಟತೆಯನ್ನು ಪಡೆದಿದೆ. ಭಾರತೀಯ ಸಂಸ್ಕೃತಿಯ ಸಾಮರಸ್ಯ, ಸಮಗ್ರತೆ ಮತ್ತು ಏಕತೆಯ ಸಂಕೇತವಾಗಿರುತ್ತದೆ ಎಂದು ವಿವರಿಸಿದರು. ಈ ಐತಿಹಾಸಿಕ ಮತ್ತು ಅಭೂತಪೂರ್ವ ಕಾರ್ಯಕ್ರಮದ ಹಿನ್ನೆಲೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಪಕ್ಷದ ಮಟ್ಟದಲ್ಲಿ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲು ಸೂಚಿಸಿದ್ದಾರೆ.

ಈ ಕಾರ್ಯಕ್ರಮಗಳು ಒಂದು ತಿಂಗಳ ಕಾಲ ದೇಶದಾದ್ಯಂತ ನಡೆಯಲಿವೆ. ಡಿಸೆಂಬರ್​ 13ರಿಂದ ಆರಂಭವಾಗಿ ಜನವರಿ 14ರ ಮಕರ ಸಂಕ್ರಾಂತಿವರೆಗೆ ನಡೆಯಲಿವೆ. ಪಕ್ಷದ ಎಲ್ಲಾ ಜನಪ್ರತಿನಿಧಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ಹಲವು ವೈವಿಧ್ಯಮಯ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ ಎಂದರು.

ಡಿಸೆಂಬರ್ 13ರ ಸಮಾರಂಭವನ್ನು ವೀಕ್ಷಿಸಲು ದೇಶದಾದ್ಯಂತ ಸುಮಾರು 51,000 ಸ್ಥಳಗಳಲ್ಲಿ ಬೃಹತ್ ಪ್ರಮಾಣದ ಎಲ್‍ಇಡಿ ಪರದೆಗಳನ್ನು ಸ್ಥಾಪಿಸಲಾಗಿದೆ. ಅದರಲ್ಲಿ ದಿವ್ಯ ಕಾಶಿ, ಭವ್ಯ ಕಾಶಿ ಕಾರ್ಯಕ್ರಮ ನೇರ ಪ್ರಸಾರವಾಗಲಿದೆ. ಕಾರ್ಯಕ್ರಮವನ್ನು ಎಲ್ಲಾ ಪ್ರಮುಖ ದೇವಾಲಯಗಳು, ಮಠಗಳು ಮತ್ತು ಇತರ ಧಾರ್ಮಿಕ ಕ್ಷೇತ್ರಗಳಲ್ಲಿ ವೀಕ್ಷಿಸಲು ಅವಕಾಶವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

ಪ್ರತಿ ಮಂಡಲಗಳಲ್ಲಿ ಕಾರ್ಯಕ್ರಮದ ಪ್ರಸಾರ ವ್ಯವಸ್ಥೆ ಇರಲಿದೆ. ಸಾಧು-ಸಂತರು ಮತ್ತು ಬುದ್ಧಿಜೀವಿಗಳು, ಪಕ್ಷದ ಕಾರ್ಯಕರ್ತರು, ಮುಖಂಡರು ಸಾರ್ವಜನಿಕರು ಈ ನೇರಪ್ರಸಾರ ವೀಕ್ಷಿಸಲಿದ್ದು, ಕಾರ್ಯಕ್ರಮದ ಯಶಸ್ಸಿಗಾಗಿ ಕಾರ್ಯಕರ್ತರು ಎಲ್ಲೆಡೆ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಉತ್ತರಪ್ರದೇಶ ರಾಜ್ಯದ ಪ್ರತಿ ಹಳ್ಳಿಗಳಲ್ಲಿ ಕಾರ್ಯಕ್ರಮದ ನೇರ ಪ್ರಸಾರ ಇರಲಿದೆ ಎಂದು ತಿಳಿಸಿದರು.

ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ, ಬೃಹತ್ ಮತ್ತು ಅದ್ಧೂರಿ ಕಾರ್ಯಕ್ರಮ ಇರಲಿದೆ. ದೇವಸ್ಥಾನ, ಮಠ, ಆಶ್ರಮ ಅಥವಾ ಇತರ ಧಾರ್ಮಿಕ ಸ್ಥಳದಲ್ಲಿ ಪಕ್ಷದ ಜಿಲ್ಲಾ ಘಟಕವು ಇದನ್ನು ಆಯೋಜಿಸಲಿದೆ. ಇದರಲ್ಲಿ ಸಂತರು, ಸ್ವಾಮೀಜಿಗಳು, ಧಾರ್ಮಿಕ ಮುಖಂಡರು, ಬುದ್ಧಿಜೀವಿಗಳು, ಮಾತ್ರವಲ್ಲದೆ, ಪಕ್ಷದ ಹಾಗೂ ಪಕ್ಷದ ಜನಪ್ರತಿನಿಧಿಗಳು, ಕಾರ್ಯಕರ್ತರು ಭಾಗವಹಿಸುವರು.

ಈ ಕಾರ್ಯಕ್ರಮದಲ್ಲಿ ದಿವ್ಯ ಕಾಶಿಭವ್ಯ ಕಾಶಿ ಕುರಿತು ಮಾಹಿತಿಯನ್ನು ನೀಡಲಾಗುವುದು. ಈ ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಧಾರ್ಮಿಕ ಮುಖಂಡರು ಮತ್ತು ಸಂತರನ್ನು ಪಕ್ಷದಿಂದ ಸನ್ಮಾನಿಸಲಾಗುವುದು ಎಂದರು. ಡಿ.13 ಕಾರ್ಯಕ್ರಮದಲ್ಲಿ ಜನ ಪ್ರತಿನಿಧಿಗಳು, ಶಾಸಕರು, ಸಂಸದರು, ಸಚಿವರು ಮತ್ತು ಮುಖ್ಯಮಂತ್ರಿಗಳು, ಪಕ್ಷದ ಸಚಿವರು, ಉಪಮುಖ್ಯಮಂತ್ರಿಗಳು ಭಾಗವಹಿಸುತ್ತಾರೆ.

ಕಾಶಿ ವಿಶ್ವನಾಥ ಧಾಮ ಉದ್ಘಾಟನೆಯ ಸಂದರ್ಭದಲ್ಲಿ ರಾಜ್ಯದ ಜನರು ಶಿವನನ್ನು ತಮ್ಮ ಮನೆಗಳಲ್ಲಿ ದೀಪಗಳನ್ನು ಬೆಳಗಿಸುವ ಮೂಲಕ ಪೂಜಿಸುತ್ತಾರೆ. ಬಿಜೆಪಿ ಪ್ರತಿ ಹಳ್ಳಿ, ಪಟ್ಟಣ ಮತ್ತು ನಗರದಲ್ಲಿ ದೀಪೋತ್ಸವ ಮಾಡಲು ಪ್ರಚಾರ ಮಾಡುತ್ತಿದೆ. ಹಣತೆ ವಿತರಣೆ ಕಾರ್ಯಕ್ರಮ ಯಶಸ್ವಿಯಾಗಿದೆ. ಹಣತೆ ವಿತರಣೆಯ ವ್ಯವಸ್ಥೆಗೆ ಬೂತ್ ಮಟ್ಟದ ಸಮಿತಿಯನ್ನು ರಚಿಸಲಾಗಿತ್ತು ಎಂದು ವಿವರಿಸಿದರು.

ಡಿಸೆಂಬರ್ 17ರಂದು ಮೇಯರ್​​ಗಳ ಸಮ್ಮೇಳನ ನಡೆಯಲಿದೆ. ಕೇಂದ್ರ ಸಚಿವಾಲಯದ ವತಿಯಿಂದ ಕಾಶಿ ವಿಶ್ವನಾಥ ಧಾಮದಲ್ಲಿ ನಡೆಯಲಿದೆ. ಕೇಂದ್ರದ ನಗರಾಭಿವೃದ್ಧಿ ಸಚಿವಾಲಯ ಹಾಗೂ ಉತ್ತರ ಪ್ರದೇಶ ಸರ್ಕಾರದ ನಗರಾಭಿವೃದ್ಧಿ ಸಚಿವಾಲಯಗಳು ಇದನ್ನು ಆಯೋಜಿಸಲಿವೆ. ಡಿಸೆಂಬರ್ 23ರಂದು ನೈಸರ್ಗಿಕ ಮತ್ತು ಸಾವಯವ ಕೃಷಿಯನ್ನು ಉತ್ತೇಜಿಸಲು ಕಾಶಿಯಲ್ಲಿ ವಿಚಾರ ಸಂಕೀರ್ಣವನ್ನು ಆಯೋಜಿಸಲಾಗಿದೆ.

ಇದರಲ್ಲಿ ಕೃಷಿ ವಿಜ್ಞಾನಿಗಳು, ಪ್ರಗತಿಪರ ರೈತರು ಮತ್ತು ದೇಶದಾದ್ಯಂತದ ಕೃಷಿ ತಜ್ಞರು ಭಾಗವಹಿಸುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಮ್ಮೇಳನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅವರು ಕೃಷಿ ಕ್ಷೇತ್ರ ಮತ್ತು ಅವರ ಹೊಸ ದೃಷ್ಟಿಕೋನವನ್ನು ಹಂಚಿಕೊಳ್ಳುತ್ತಾರೆ ಎಂದು ತಿಳಿಸಿದರು.

ಇದನ್ನೂ ಓದಿ: ಮತಾಂತರ ನಿಷೇಧ ಕಾಯ್ದೆ ಜಾರಿ ಬೇಡ: ಸಿಎಂಗೆ ಕ್ರೈಸ್ತ ಸಮುದಾಯದ ಮನವಿ

ABOUT THE AUTHOR

...view details