ದೇವನಹಳ್ಳಿ: ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ (ಬಿಐಇಟಿಸಿ) ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಉದ್ಘಾಟಿಸಲಿದ್ದಾರೆ. ಕಲಬುರಗಿಯಿಂದ ನಾಳೆ ಮಧ್ಯಾಹ್ನ 2.10 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿಂದ ನೇರವಾಗಿ ಬಿ.ಮಾರೇನಹಳ್ಳಿಯಲ್ಲಿರುವ ಬೋಯಿಂಗ್ ಇಂಡಿಯಾ ಇಂಜಿನಿಯರಿಂಗ್ ಅಂಡ್ ಟೆಕ್ನಾಲಜಿ ಸೆಂಟರ್ನಲ್ಲಿ ಆಯೋಜಿಸಿರುವ ಕಾರ್ಯಕ್ರಮ ಸ್ಥಳಕ್ಕೆ ತೆರಳಲಿದ್ದಾರೆ. ಮಧ್ಯಾಹ್ನ 2.45 ರಿಂದ 3.45 ರವರೆಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. 3.55 ಕ್ಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಚೆನ್ನೈಗೆ ತೆರಳಲಿದ್ದಾರೆ.
ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಬೋಯಿಂಗ್ ಕೇಂದ್ರ ಮತ್ತು ಇದರ ಜೊತೆಗೆ ಬೋಯಿಂಗ್ ಸುಕನ್ಯಾ ಯೋಜನೆಯನ್ನು ಪ್ರಧಾನಿ ಉದ್ಘಾಟನೆ ಮಾಡಲಿದ್ದಾರೆ. ಕಾರ್ಯಕ್ರಮಕ್ಕೆ ಕೇವಲ ಸೀಮಿತ ವ್ಯಕ್ತಿಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಸುಮಾರು ಒಂದು ಗಂಟೆಗಳ ಕಾಲ ಪ್ರಧಾನಿಯವರು ಕಾರ್ಯಕ್ರಮದಲ್ಲಿ ಭಾಗಿಯಾಗಿ ಬಳಿಕ ಚೆನ್ನೈಗೆ ಪ್ರಯಾಣಿಸಲಿದ್ಧಾರೆ.
ಏರೋಸ್ಪೇಸ್ ದೊಡ್ಡ ಕ್ಯಾಂಪಸ್: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪ 43 ಎಕರೆ ವಿಶಾಲ ಪ್ರದೇಶದಲ್ಲಿ ಅಂತರಿಕ್ಷಯಾನ ತಂತ್ರಜ್ಞಾನ ಸಂಶೋಧನೆ ಮತ್ತು ಅಭಿವೃದ್ಧಿ ಕ್ಯಾಂಪಸ್ ತಲೆ ಎತ್ತಿದೆ. ಬೋಯಿಂಗ್ ಸಹಭಾಗಿತ್ವದ ಏರೋಸ್ಪೇಸ್ ಇಂಜಿನಿಯರಿಂಗ್ ಮತ್ತು ಟೆಕ್ನಾಲಜಿ ಕೇಂದ್ರ 2018ರಲ್ಲಿ ಕಾರ್ಯಾರಂಭಿಸಿದೆ. ಭಾರತದಲ್ಲಿ ಅಂತರಿಕ್ಷಯಾನ ವಾಣಿಜ್ಯಿಕ ಮತ್ತು ರಕ್ಷಣಾ ಕ್ಷೇತ್ರವು ವಿಫುಲ ಅವಕಾಶಗಳನ್ನು ಸೃಷ್ಟಿಸಿದ್ದು, ಕಳೆದ ವರ್ಷವಷ್ಟೇ 1600 ಕೋಟಿ ರೂ ಬಂಡವಾಳವನ್ನು ಹೂಡಿಕೆ ಸಾಮರ್ಥ್ಯ ವಿಸ್ತರಿಸಿದ್ದು, ಅಂದಾಜು ಐದು ಸಾವಿರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಿವೆ.