ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಜೂನ್ 21ರ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸಲು ಎರಡು ದಿನಗಳ ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ 15 ಸಾವಿರ ಕೋಟಿ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆ ಸೇರಿದಂತೆ ಹಲವು ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ. ಮುಂದಿನ ಚುನಾವಣೆ ಹಿನ್ನೆಲೆಯಲ್ಲಿ, ಮೋದಿ ಕಾರ್ಯಕ್ರಮವನ್ನು ಪ್ರಚಾರ ಕಾರ್ಯದಂತೆ ಬಳಸಿಕೊಳ್ಳಲು ಬಿಜೆಪಿ ಮುಂದಾಗಿದೆ. ಅದಕ್ಕಾಗಿಯೇ ಬೃಹತ್ ಸಾರ್ವಜನಿಕ ಸಮಾರಂಭ ಆಯೋಜಿಸಿದೆ.
ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಿಲಾನ್ಯಾಸ: ಜೂನ್ 20ರಂದು ಬೆಳಗ್ಗೆ 9.20ಕ್ಕೆ ನವದೆಹಲಿಯಿಂದ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿ 11.55ಕ್ಕೆ ಯಲಹಂಕ ವಾಯುನೆಲೆಗೆ ಆಗಮಿಸಲಿದ್ದು, 12ಗಂಟೆಗೆ ಹೆಲಿಕಾಫ್ಟರ್ ಮೂಲಕ ಕೊಮ್ಮಘಟ್ಟಕ್ಕೆ ಪ್ರಯಾಣಿಸಲಿದ್ದಾರೆ. 12.30ಕ್ಕೆ ಬೃಹತ್ ಸಾರ್ವಜನಿಕ ಕಾರ್ಯಕ್ರಮದಲ್ಲಿ ಬೆಂಗಳೂರು ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಏನಿದು ಯೋಜನೆ?ಪಿಪಿಪಿ ಮಾದರಿಯಡಿ 15,767 ಕೋಟಿ ರೂ. ವೆಚ್ಚದಲ್ಲಿ ಈ ಉಪನಗರ ರೈಲು ಯೋಜನೆಯನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 148.17 ಕಿ.ಮೀ. ವ್ಯಾಪ್ತಿಯಲ್ಲಿ ನಾಲ್ಕು ಪ್ರತ್ಯೇಕ ಕಾರಿಡಾರ್‌ಗಳನ್ನು ನಿರ್ಮಿಸಲಾಗುತ್ತಿದೆ. ಬೆಂಗಳೂರು- ದೇವನಹಳ್ಳಿ (41.40 ಕಿ.ಮೀ), ಬೈಯ್ಯಪ್ಪನಹಳ್ಳಿ-ಚಿಕ್ಕಬಾಣಾವರ (25.01 ಕಿ.ಮೀ), ಕೆಂಗೇರಿ-ಬೆಂಗಳೂರು ಕಂಟೋನೆಂಟ್ (35.52 ಕಿ.ಮೀ) ಮತ್ತು ಹೀಲಲಿಗೆ-ರಾಜಾನುಕುಂಟೆ (46.24 ಕಿ.ಮೀ) ನಾಲ್ಕು ಕಾರಿಡಾರ್‌ನಲ್ಲಿ ಯೋಜನೆ ಕಾರ್ಯರೂಪಕ್ಕೆ ಬರಲಿದೆ. ಯೋಜನೆಯಡಿ 62 ನಿಲ್ದಾಣಗಳು, 22 ಎಲಿವೇಟೆಡ್ ಮಾರ್ಗ ಇರಲಿದ್ದು, 2026ರಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಹಲವು ಯೋಜನೆಗಳಿಗೆ ಚಾಲನೆ:ಇದೇ ವೇಳೆ ದೇಶದ ಮೊದಲ ಹವಾನಿಯಂತ್ರಿತ ರೈಲ್ವೆ ನಿಲ್ದಾಣ ಸರ್.ಎಂ ವಿಶ್ವೇಶ್ವರಯ್ಯ ಟರ್ಮಿನಲ್ ಉದ್ಘಾಟನೆ, ರೈಲ್ವೆ ಮತ್ತು ರಸ್ತೆ ಯೋಜನೆಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮತ್ತು ಮಲ್ಟಿ ಮೊಡಲ್ ಲಾಜಿಸ್ಟಿಕ್ ಪಾರ್ಕ್ಗೆ ಚಾಲನೆ ನೀಡಲಿದ್ದಾರೆ.