ಬೆಂಗಳೂರು: ಚಂದ್ರಯಾನ-3 ಸಾಫ್ಟ್ ಲ್ಯಾಂಡಿಂಗ್ ಯಶಸ್ವಿಯಾದ ಬೆನ್ನಲ್ಲೇ ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ಖುದ್ದು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಅವರನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುತ್ತಿದ್ದು, ರೋಡ್ ಶೋ ಕೂಡ ಆಯೋಜನೆ ಮಾಡಲಾಗುತ್ತದೆ ಎಂದು ಮಾಜಿ ಡಿಸಿಎಂ ಆರ್ ಅಶೋಕ್ ಹೇಳಿದ್ದಾರೆ.
ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಂದ್ರಯಾನ-3ಗೆ ಸರಿಸಾಟಿಯಾದ ಸಾಧನೆಯನ್ನು ಜಗತ್ತಿನಲ್ಲಿ ಬೇರೆ ಯಾರೂ ಮಾಡಿಲ್ಲ. ಈ ಸಾಧನೆಯಿಂದ ನಮಗೆಲ್ಲ ಬಹಳ ಹೆಮ್ಮೆ ಇದೆ. ಮೋದಿಯವರು ನಾಡಿದ್ದು (ಆಗಸ್ಟ್ 26) ಬೆಳಗ್ಗೆ ಬರುತ್ತಿದ್ದಾರೆ. ಎಚ್‌ಎಎಲ್ ನಲ್ಲಿ ಪ್ರಧಾನಿಯವರನ್ನು ನಾವು ಸ್ವಾಗತಿಸುತ್ತಿದ್ದೇವೆ ಎಂದು ಹೇಳಿದರು.
ಪ್ರಧಾನಿಯವರ ಸ್ವಾಗತಕ್ಕೆ ಐದು ಸಾವಿರ ಜನ ಸೇರುತ್ತೇವೆ. ಅಲ್ಲಿ ಮೋದಿಯವರು ಎಲ್ಲರನ್ನು ಉದ್ದೇಶಿಸಿ ಮಾತಾಡಬಹುದು. ಇಸ್ರೋ ಸಂಸ್ಥೆ ಇರುವ ಪ್ರದೇಶದಲ್ಲಿ ಮೋದಿಯವರು ಬಂದಾಗ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ನಡೆಸಲು ಕೇಂದ್ರ ಬಿಜೆಪಿಯಿಂದ ಸೂಚನೆ ಬಂದಿದೆ. ಮೋದಿಯವರನ್ನು ಅದ್ಧೂರಿಯಾಗಿ ಸ್ವಾಗತಿಸುತ್ತೇವೆ. ದಾಸರಹಳ್ಳಿ ಕ್ಷೇತ್ರದಲ್ಲಿ ಇಸ್ರೋ ಸಂಸ್ಥೆ ಇದೆ. ಅಲ್ಲಿ ಒಂದು ಕಿ.ಮೀವರೆಗೆ ರೋಡ್ ಶೋ ಮಾಡುತ್ತೇವೆ. ರೋಡ್ ಶೋ ಬಗ್ಗೆ ದಾಸರಹಳ್ಳಿ ಶಾಸಕ ಮುನಿರಾಜು ಜತೆ ಚರ್ಚೆ ಮಾಡಿದ್ದೇವೆ. ಇಂದು ಸಂಜೆ ಬಿಜೆಪಿ ಕಚೇರಿಯಲ್ಲಿ ಸಭೆ ನಡೆಸುತ್ತಿದ್ದು, ಮೋದಿಯವರ ಭೇಟಿ ದಿನದ ಕಾರ್ಯಕ್ರಮಗಳ ಬಗ್ಗೆ ಚರ್ಚೆ ನಡೆಸುತ್ತೇವೆ ತಿಳಿಸಿದರು.
ಚಂದ್ರಯಾನ-3 ಸಕ್ಸಸ್ ಆಗಿದೆ. ಸಕ್ಸಸ್ ಆಗಲು ಇಡೀ ಮನುಕುಲದ ಆಶೀರ್ವಾದ ಇತ್ತು. ಪ್ರಾರಂಭದಲ್ಲೇ ದೇವರು ನಮಗೆ ವರ ಕೊಟ್ಟಿದ್ದ. ವರ ಕೊಟ್ಟ ನಂತರವೂ ದೇವರನ್ನು ಸ್ಮರಿಸಿಕೊಳ್ಳಬೇಕು. ಅದಕ್ಕಾಗಿ ಇವತ್ತು ನಮ್ಮ ಕ್ಷೇತ್ರದ ವೆಂಕಟೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆ ಮಾಡಿಸಿದ್ದೇವೆ. ಒಂದು ಸಾವಿರಕ್ಕೂ ಹೆಚ್ಚು ಇಸ್ರೋ ವಿಜ್ಞಾನಿಗಳು ನಮ್ಮ ಪದ್ಮನಾಭ ನಗರದಲ್ಲಿ ವಾಸ ಮಾಡುತ್ತಿದಾರೆ. ಇವತ್ತು ಅವರನ್ನೂ ಕರೆದು ಸನ್ಮಾನ ಮಾಡಿದ್ದೇವೆ ಎಂದರು.