ಬೆಂಗಳೂರು:ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಈ ಹಿಂದೆ ರಾಜ್ಯದಲ್ಲಿದ್ದ ಬಿಜೆಪಿ ಸರ್ಕಾರದ ಪ್ರಯತ್ನದ ಫಲವಾಗಿ ಬೆಂಗಳೂರಿಗೆ ಅಮೆರಿಕ ರಾಯಭಾರಿ ಕಚೇರಿ, ಅಮೆರಿಕಾದ ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆ ಯುದ್ದ ವಿಮಾನ ಇಂಜಿನ್ ಉತ್ಪಾದನೆ ಕುರಿತು ಹೆಚ್ಎಎಲ್ ಒಡಂಬಡಿಕೆ, ಅಪ್ಲೈ ಮೆಟೀರಿಯಲ್ಸ್ ಕಂಪನಿ ಜೊತೆ ಸೆಮಿಕಂಡಕ್ಟರ್ ಉತ್ಪಾದನಾ ಘಟಕ, ಅಂತಾರಾಷ್ಟ್ರೀಯ ಬ್ಯಾಟರಿ ಸಂಸ್ಥೆಯಿಂದ ಲಿಥಿಯನ್ ಅಯಾನ್ ಬ್ಯಾಟರಿ ಉತ್ಪಾದನಾ ಘಟಕ ಸ್ಥಾಪನೆ ಸಂಬಂಧ ಭಾರತ ಅಮೆರಿಕ ನಡುವೆ ಒಡಂಬಡಿಕೆಯಾಗಿದ್ದು, ಇವುಗಳ ಯಶಸ್ವಿ ಅನುಷ್ಠಾನಕ್ಕೆ ಈ ಹಿಂದಿನ ಬಿಜೆಪಿ ಸರ್ಕಾರ ನೀಡಿದ ಭರವಸೆಗಳನ್ನು ಈಗಿನ ಕಾಂಗ್ರೆಸ್ ಸರ್ಕಾರ ಮುಂದುವರೆಸಬೇಕು, ಅಗತ್ಯ ಸೌಲಭ್ಯ ಕಲ್ಪಿಸಬೇಕು ಎಂದು ಸಂಸದ ತೇಜಸ್ವಿ ಸೂರ್ಯ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಅಮೆರಿಕ ರಾಯಭಾರಿ ಕಚೇರಿ:ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ದೊಡ್ಡ ಪ್ರಮಾಣದಲ್ಲಿ ಬೆಂಗಳೂರಿನಿಂದ ಅಮೆರಿಕಕ್ಕೆ ವಿದ್ಯಾರ್ಥಿಗಳು, ಉದ್ಯೋಗಿಗಳ, ನಾಗರಿಕರು ಪ್ರಯಾಣಿಸುತ್ತಿದ್ದರೂ ಇಲ್ಲಿ ಅಮೆರಿಕ ರಾಯಭಾರಿ ಕಚೇರಿ ಆರಂಭಿಸುವ ಇಚ್ಚಾಶಕ್ತಿಯನ್ನು ತೋರಿರಲಿಲ್ಲ. ಕೇಂದ್ರ ಸರ್ಕಾರ ಈ ಹಿಂದೆ ಇದಕ್ಕೆ ಸರಿಯಾದ ಮಹತ್ವ ನೀಡಿರಲಿಲ್ಲ. 10 ವರ್ಷ ಯುಪಿಎ ಸರ್ಕಾರ ಹೈದರಾಬಾದ್, ಕೋಲ್ಕತಾದಲ್ಲಿ ಅಮೆರಿಕ ಕಾನ್ಸೊಲೇಟ್ ಆರಂಭವಾದರೂ ಬೆಂಗಳೂರಿನಲ್ಲಿ ಆಗಲಿಲ್ಲ. ಆದರೆ ಮೋದಿ ಸರ್ಕಾರ ಬಂದ ನಂತರ ನಾವು ಮೂರು ಜನ ಸಂಸದರು ಪ್ರಯತ್ನ ನಡೆಸಿದೆವು, ನಾನು ಸಂಸದನಾದ ಮೊದಲ ಸದನದಲ್ಲೇ ಕಾನ್ಸುಲೇಟ್ ಪ್ರಸ್ತಾಪಿಸಿದ್ದೆ, ಪಿಸಿ ಮೋಹನ್ ಕೂಡ ಮನವಿ ಮಾಡಿದ್ದರು ಎಂದು ನೆನಪು ಮಾಡಿಕೊಂಡರು.
2020 ರಲ್ಲಿ ಕೇಂದ್ರ ವಿದೇಶಾಂಗ ಸಚಿವ ಜೈಶಂಕರ್ ಸಚಿವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೆವು ಅಂದು ಅವರು ನಾವು ಅಮೆರಿಕದಲ್ಲಿ ಒಂದು ಹೊಸ ಕಚೇರಿ ತೆರೆದರೆ ಅವರು ಇಲ್ಲಿ ಹೊಸ ಕಚೇರಿ ತೆರೆಯಲಾಗುತ್ತದೆ ಇದು ಇರುವ ವ್ಯವಸ್ಥೆ ಎಂದಿದ್ದರು. ನಂತರ ಅಮೆರಿಕ ರಾಯಭಾರಿಗಳನ್ನೆಲ್ಲಾ ಭೇಟಿ ಮಾಡಿ ಬೆಂಗಳೂರಿನಲ್ಲಿ ಕಚೇರಿ ತೆರೆಯುವ ಮನವಿ ಮಾಡಿದ್ದೆವು. ಯುಎಸ್ ರಾಯಭಾರಿಯ ಡಾ ಕೆನ್ನೆತ್ ಜಸ್ಟರ್ ಜೊತೆ ಮಾತುಕತೆ ವೇಳೆ ಅವರು ಮುಂದಿನ ಕಚೇರಿ ಆರಂಭದ ವೇಳೆ ಬೆಂಗಳೂರಿಗೆ ಮೊದಲ ಆದ್ಯತೆ ನೀಡುವುದಾಗಿ ತಿಳಿಸಿದ್ದರು ಎಂದು ತೇಜಸ್ವಿ ಸೂರ್ಯ ಹೇಳಿದರು.
ಜೈಶಂಕರ್ ಕೂಡ ನಮಗೆ ಈ ಬಗ್ಗೆ ಭರವಸೆ ನೀಡಿದ್ದರು. ಈ ಎಲ್ಲಾ ಪ್ರಯತ್ನದ ಫಲವಾಗಿ ನಿನ್ನೆ ನಮ್ಮೆಲ್ಲರಿಗೂ ಸಂತಸ ತರುವಂತೆ ಬೆಂಗಳೂರಿಗೆ ಯುಎಸ್ ಕಾನ್ಸುಲೇಟ್ ಆರಂಭಿಸುವ ಪ್ರಕಟಣೆ ಮಾಡಿದೆ ಇದರಿಂದಾಗಿ ನಾಲ್ಕೈದು ಲಕ್ಷ ಜನ ಅಮೆರಿಕ ವೀಸಾಗಾಗಿ ಬೇರೆ ರಾಜ್ಯಗಳಿಗೆ ಅಲೆಯುವುದು ತಪ್ಪಲಿದೆ. ಯಡಿಯೂರಪ್ಪ ಕೂಡ ರಾಯಭಾರಿ ಕಚೇರಿ ಆರಂಭಕ್ಕೆ ಅಗತ್ಯ ಸೌಲಭ್ಯ ಕಲ್ಪಿಸುವ ಭರವಸೆ ನೀಡಿದ್ದರು. ಅದರಂತೆ ಅಂದಿನ ಐಟಿಬಿಟಿ ಸಚಿವ ಅಶ್ವತ್ಥನಾರಾಯಣ ಕೇಳಿದ ಸ್ಥಳದಲ್ಲಿ ಕಚೇರಿಗೆ ಅವಕಾಶ ಹಾಗೂ ಸೌಲಭ್ಯ ಕಲ್ಪಿಸುವ ಭರವಸೆ ನೀಡಿತ್ತು. ಈ ಬದ್ಧತೆಯನ್ನು ಈ ಸರ್ಕಾರ ಮುಂದುವರೆಸಿ ಎಲ್ಲ ಸವಲತ್ತು ಮಾಡಬೇಕು ಎಂದು ಮನವಿ ಮಾಡಿದರು.
ಹೆಚ್ಎಎಲ್ಗೆ ಮರು ಜೀವ:ಹೆಚ್ಎಎಲ್ ಮತ್ತು ಜನರಲ್ ಎಲೆಕ್ಟ್ರಿಕ್ ಕಂಪನಿ ಜೊತೆ ಒಪ್ಪಂದ ಮಾಡಿಸಲಾಗಿದೆ. ಎಫ್414 ಯುದ್ಧ ವಿಮಾನ ಉತ್ಪಾದನೆ ಕುರಿತು ಜಂಟಿ ಒಡಂಬಡಿಕೆ ಮೂಲಕ ಹೆಚ್ಎಎಲ್ನಲ್ಲಿ ನಿರ್ಮಾಣ ಮಾಡುವ ಒಪ್ಪಂದ ಆಗಿದೆ. ಇದರಿಂದ 4 ಸಾವಿರಕ್ಕೂ ಹೆಚ್ಚು ಹೈ ಎಂಡ್ ಇಂಜಿನಿಯರ್ ಹುದ್ದೆಗಳು ಸೃಷ್ಟಿಯಾಗಲಿದೆ. ಕನ್ನಡಿಗರಿಗೆ ಉದ್ಯೋಗಾವಕಾಶ ಲಭಿಸಲಿದೆ. ಜಾಗತಿಕ ಮಟ್ಟದಲ್ಲಿ ಹೆಚ್ಎಎಲ್ ಭದ್ರವಾಗಿ ನೆಲೆಯೂರುವ ಸ್ಥಿತಿ ನಿರ್ಮಾಣವಾಗಿದೆ ಎಂದರು.