ಇಸ್ರೋ ವಿಜ್ಞಾನಿಗಳ ಅಭಿನಂದಿಸಲು ನಾಳೆ ಮೋದಿ ಬೆಂಗಳೂರಿಗೆ: ಪೊಲೀಸರಿಂದ ಬಿಗಿ ಬಂದೋಬಸ್ತ್ ಬೆಂಗಳೂರು: ಚಂದ್ರಯಾನ-3 ಯಶಸ್ವಿಯಾದ ಹಿನ್ನೆಲೆಯಲ್ಲಿ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ನಾಳೆ (ಶನಿವಾರ) ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಈ ನಿಮಿತ್ತ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮುಂಜಾನೆ 5:55ಕ್ಕೆ ನಗರದ ಎಚ್ಎಎಲ್ ವಿಮಾನ ನಿಲ್ದಾಣಕ್ಕೆ ಪ್ರಧಾನಿ ಆಗಮಿಸುವರು. ಹೆಚ್ಎಎಲ್ನಿಂದ ಪೀಣ್ಯದಲ್ಲಿರುವ ಇಸ್ರೋ ಕಚೇರಿವರೆಗೂ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ.
ನಗರ ಪೊಲೀಸರ್ ಕಮಿಷನರ್ ಬಿ.ದಯಾನಂದ್ ನೇತೃತ್ವದಲ್ಲಿ ಹೆಚ್ಚುವರಿ ಆಯುಕ್ತ ರಮಣ್ ಗುಪ್ತಾ ಹಾಗೂ ಸತೀಶ್ ಕುಮಾರ್ ಸೇರಿ ಎಲ್ಲಾ ಡಿಸಿಪಿಗಳು ಭದ್ರತೆಯ ಮೇಲ್ವಿಚಾರಣೆ ವಹಿಸಲಿದ್ದಾರೆ. 50 ಎಸಿಪಿ, 100ಕ್ಕೂ ಹೆಚ್ಚು ಇನ್ಸ್ಪೆಕ್ಟರ್ಸ್, 1,500ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಗೊಂಡಿದ್ದಾರೆ.
ಪೊಲೀಸ್ ಆಯುಕ್ತ ದಯಾನಂದ್ ಮಾತನಾಡಿ, "ಹೆಚ್ಎಎಲ್ನಿಂದ ಇಸ್ರೋ ತನಕ ಸೂಕ್ತ ಭದ್ರತೆ ಕೈಗೊಳ್ಳಲಾಗಿದೆ. ರೋಡ್ ಶೋ ಇರುವುದಿಲ್ಲ. ಕೆಲ ಸ್ಥಳಗಳಲ್ಲಿ ಜನರು ಜಮಾಯಿಸುವ ಸಾಧ್ಯತೆ ಬಗ್ಗೆ ಮಾಹಿತಿಯಿದೆ. ಈ ಕಾರಣಕ್ಕಾಗಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ" ಎಂದು ತಿಳಿಸಿದರು.
ಇದನ್ನೂ ಓದಿ:ಚಂದ್ರಯಾನ-3 ಸಕ್ಸಸ್: ಇಸ್ರೋ ತಂಡಕ್ಕೆ ಅಭಿನಂದನೆ ಸಲ್ಲಿಸಲು ಶನಿವಾರ ಬೆಂಗಳೂರಿಗೆ ಮೋದಿ ಆಗಮನ!
ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾತನಾಡಿ, "ಸಂಚಾರ ವ್ಯವಸ್ಥೆಯಲ್ಲಿ ಕೆಲವು ಬದಲಾವಣೆ ಮಾಡುತ್ತಿದ್ದೇವೆ. ಹಳೆ ಮದ್ರಾಸ್ ರಸ್ತೆ, ಕಬ್ಬನ್ ರಸ್ತೆ, ರಾಜಭವನ ರೋಡ್, ಸಿ.ವಿ ರಾಮನ್ ರಸ್ತೆ, ಯಶವಂತಪುರ ರಸ್ತೆ, ಗೊರಗುಂಟೆಪಾಳ್ಯ, ಜಾಲಹಳ್ಳಿ ಮಾರ್ಗ ಪೀಣ್ಯ ರಸ್ತೆ ಬದಲಾವಣೆ ಮಾಡಲಾಗಿದೆ" ಎಂದು ಮಾಹಿತಿ ನೀಡಿದರು.
"ಜನರಲ್ಲಿ ಪರ್ಯಾಯ ರಸ್ತೆ ಬಳಸುವಂತೆ ಮನವಿ ಮಾಡುತ್ತಿದ್ದೇವೆ. ಬೆಳಗ್ಗೆ 4 ರಿಂದ 10 ಗಂಟೆಯವರಿಗೆ ಭಾರಿ ವಾಹನಗಳಿಗೆ ಪ್ರವೇಶವಿಲ್ಲ. ತದನಂತರ ಅಂತಹ ವಾಹನಗಳಿಗೆ ಪ್ರವೇಶ ನೀಡಲಾಗುವುದು. ಪೀಣ್ಯ ಇಂಡಸ್ಟ್ರಿಯಲ್ ಏರಿಯಾಕ್ಕೆ ಬರುವ ಸರಕು ಸಾಗಾಣಿಕೆಯ ವಾಹನ ಹಾಗೂ ಭಾರಿ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಮುಂಜಾನೆ 4 ಗಂಟೆಯ ನಂತರ ಪರ್ಯಾಯ ರಸ್ತೆ ಬಳಸಬೇಕು" ಎಂದು ವಾಹನ ಸವಾರರಿಗೆ ತಿಳಿಸಿದ್ದಾರೆ.
ರೋಡ್ ಶೋ ಇಲ್ಲ:ಯಾವುದೇ ರೋಡ್ ಶೋ ನಡೆಸದೇ, ಪಕ್ಷದ ಬಾವುಟ ಪ್ರದರ್ಶಿಸದೇ ಇಸ್ರೋ ವಿಜ್ಞಾನಿಗಳ ಭೇಟಿಗೆ ಸೀಮಿತಗೊಳಿಸಿ ಪ್ರಧಾನಿ ಪ್ರವಾಸ ಆಯೋಜನೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ತೆರೆದ ವಾಹನದ ಬದಲು ಅಧಿಕೃತ ಕಾರಿನಲ್ಲಿಯೇ ಕಾನ್ವಾಯ್ ಮೂಲಕ ರಸ್ತೆ ಮಾರ್ಗದಲ್ಲಿ ಸಂಚರಿಸುತ್ತಲೇ ಕಾರಿನೊಳಗಿನಿಂದ ಪ್ರಧಾನಿ ಕಾರ್ಯಕರ್ತರತ್ತ ಕೈ ಬೀಸಲಿದ್ದಾರೆ.
ಇದನ್ನೂ ಓದಿ:ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಲು ನಾಳೆ ಬೆಂಗಳೂರಿಗೆ ಪ್ರಧಾನಿ: ಸೂರ್ಯಯಾನದ ಬಗ್ಗೆ ಮಾತುಕತೆ... ರೋಡ್ ಶೋ ಇರಲ್ಲ!