ಬೆಂಗಳೂರು: ಕೊರೊನಾ ನಿರ್ವಹಣೆ ಸಂಬಂಧ ನಾಳೆ ಪ್ರಧಾನಿ ರಾಜ್ಯದ 17 ಜಿಲ್ಲೆಗಳ ಡಿಸಿಗಳ ಜೊತೆ ವಿಡಿಯೋ ಸಂವಾದ ನಡೆಸಲಿದ್ದಾರೆ.
ಈ ಸಭೆಯಲ್ಲಿ ಸಿಎಂ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿಗಳೂ ಪಾಲ್ಗೊಳ್ಳಲಿದ್ದಾರೆ. ಉತ್ತರ ಕನ್ನಡ, ಹಾಸನ, ಬಳ್ಳಾರಿ, ಮೈಸೂರು, ತುಮಕೂರು, ಕೋಲಾರ, ಕೊಡಗು, ಬೆಂಗಳೂರು ನಗರ, ಉಡುಪಿ, ಬೆಂಗಳೂರು ಗ್ರಾಮಾಂತರ, ಶಿವಮೊಗ್ಗ, ಧಾರವಾಡ, ದಕ್ಷಿಣ ಕನ್ನಡ, ರಾಯಚೂರು, ಕಲಬುರಗಿ, ಮಂಡ್ಯ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಸಂವಾದ ನಡೆಸಿ, ಜಿಲ್ಲೆಯಲ್ಲಿನ ಕೊರೊನಾ ಸ್ಥಿತಿಗತಿ, ನಿರ್ವಹಣೆ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ರಾಜ್ಯದ ಈ 17 ಜಿಲ್ಲೆಗಳಲ್ಲಿ ಕೊರೊನಾ ಪ್ರಕರಣ ಹೆಚ್ಚಿದ್ದು, ಸದ್ಯದ ಸ್ಥಿತಿಗತಿ ಈ ಸಂಬಂಧ ತೆಗೆದುಕೊಂಡಿರುವ ಕ್ರಮ, ಲಸಿಕಾ ಕಾರ್ಯಕ್ರಮ, ಆಕ್ಸಿಜನ್, ರೆಮ್ಡೆಸಿವಿರ್ ಔಷಧ ಲಭ್ಯತೆ ಬಗ್ಗೆ ಡಿಸಿಗಳ ಜೊತೆ ವಿಚಾರ ವಿನಿಮಯ ಮಾಡಲಿದ್ದು, ಕೊರೊನಾ ನಿಯಂತ್ರಣದ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ. ಈಗಾಗಲೇ ಗ್ರಾಮಗಳಲ್ಲೂ ಕೊರೊನಾ ಪ್ರಕರಣ ಹೆಚ್ಚಾಗುತ್ತಿದ್ದು, ಈ ಸಂಬಂಧ ಜಿಲ್ಲಾಡಳಿತ ತೆಗೆದುಕೊಂಡಿರುವ ಮುಂಜಾಗ್ರತಾ ಕ್ರಮ, ನಿಯಂತ್ರಣ ಕ್ರಮಗಳ ಬಗ್ಗೆ ಮಾಹಿತಿ ಪಡೆಯಲಿದ್ದಾರೆ.
ಇಂದು ಸಿಎಂ ಎಲ್ಲ ಜಿಲ್ಲೆಗಳ ಡಿಸಿಗಳು, ಸಿಇಒಗಳ ಜೊತೆ ವಿಡಿಯೋ ಸಂವಾದ ನಡೆಸಿ ಅವಲೋಕನ ನಡೆಸಿದರು. ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳುವಂತೆ ಖಡಕ್ ಸೂಚನೆ ನೀಡಿದರು. ಜಿಲ್ಲೆಗಳಲ್ಲಿನ ಕೊರೊನಾ ನಿರ್ವಹಣೆ ಸಂಬಂಧ ಸಮಗ್ರ ಮಾಹಿತಿ ಕಲೆ ಹಾಕಿದರು.