ಏರೋ ಇಂಡಿಯಾ ಶೋದಲ್ಲಿ ಪ್ರಧಾನಿ ನರೇಂದ್ರ ಮೋದಿ ಬೆಂಗಳೂರು:ಏರೋ ಇಂಡಿಯಾ ಶೋ ಇದು ಕೇವಲ ಪ್ರದರ್ಶನವಲ್ಲ, ದೇಶದ ಶಕ್ತಿಯಾಗಿದೆ. ಅಭಿವೃದ್ಧಿಯ ಪ್ರತೀಕವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಹಲವು ವಿಶೇಷತೆಗಳಿಂದ ಕೂಡಿದ 14ನೇ ಆವೃತ್ತಿಯ ಏರೋ ಇಂಡಿಯಾ ಶೋ- 2023 ಉದ್ಘಾಟಿಸಿ ಮಾತನಾಡಿದ ಅವರು, ದೇಶ ರಕ್ಷಣಾ ವಲಯದಲ್ಲಿ ಅಭಿವೃದ್ಧಿ ಸಾಧಿಸುತ್ತಿದೆ. ಅದರಲ್ಲಿ ಜನರನ್ನು ಸಹಭಾಗಿಗಳಾಗಿ ಎಂದು ಕರೆ ನೀಡಿದರು.
ಸ್ವಾತಂತ್ರ್ಯದ ಅಮೃತ ಕಾಲದಲ್ಲಿರುವ ದೇಶವು ಯುದ್ಧವಿಮಾನದ ಪೈಲಟ್‌ನಂತೆ ಮುನ್ನುಗ್ಗುತ್ತಿದೆ. ಹೊಸ ಎತ್ತರಕ್ಕೆ ದೇಶ ಹಾರುತ್ತಿದೆ. ಹಿಂಜರಿಕೆಗಳಿಲ್ಲದೇ ಉತ್ಸಾಹದಲ್ಲಿ ದೇಶ ನಡೆಯುತ್ತಿದೆ. ಇಂದಿನ ಭಾರತವು ವೇಗವಾಗಿ ಯೋಚಿಸುತ್ತದೆ, ದೂರದೃಷ್ಟಿ ಹೊಂದಿದೆ. ತ್ವರಿತ ನಿರ್ಧಾರಗಳನ್ನು ತೆಗೆದುಕೊಳ್ಳುತ್ತದೆ. ದೇಶದ ವೇಗ ಎಷ್ಟೇ ಇದ್ದರೂ, ಅದು ಎಲ್ಲರೊಂದಿಗೆ ಬೆರೆತು ಸಾಗಲಿದೆ ಎಂದು ಹೇಳಿದರು.
ಕಳೆದ 8 -9 ವರ್ಷಗಳಲ್ಲಿ ದೇಶ ತನ್ನ ರಕ್ಷಣಾ ಕ್ಷೇತ್ರದಲ್ಲಿ ದೊಡ್ಡ ಬದಲಾವಣೆ ಕಂಡಿದೆ. ಇದನ್ನು ಕೇವಲ ಪ್ರಾರಂಭವೆಂದು ಪರಿಗಣಿಸುತ್ತೇವೆ. 2024- 25ರ ವೇಳೆಗೆ ರಕ್ಷಣಾ ರಫ್ತುಗಳನ್ನು 5 ಬಿಲಿಯನ್ ಡಾಲರ್ಗೆ ಕೊಂಡೊಯ್ಯುವ ಗುರಿಯನ್ನು ಹೊಂದಿದ್ದೇವೆ. ರಕ್ಷಣಾ ಉತ್ಪಾದನಾ ರಾಷ್ಟ್ರಗಳ ಸಾಲಿಗೆ ಭಾರತ ಶೀಘ್ರವೇ ಸೇರಲಿದೆ ಎಂದು ಹೇಳಿದರು.
ರಕ್ಷಣಾ ಶಕ್ತಿ ಬಲಪಡಿಸಿ:ಹೊಸ ಆವಿಷ್ಕಾರಗಳ ಮೂಲಕ ದೇಶದ ರಕ್ಷಣಾ ಶಕ್ತಿಯನ್ನು ಬಲಪಡಿಸಲು ಕರ್ನಾಟಕದ ಯುವಜನತೆ ತಮ್ಮ ತಾಂತ್ರಿಕ ಕೌಶಲ್ಯವನ್ನು ಬಳಸಬೇಕು. ಏರೋ ಇಂಡಿಯಾ ಹಲವು ಕಾರಣಕ್ಕಾಗಿ ವಿಶೇಷವಾಗಿದೆ. ತಂತ್ರಜ್ಞಾನ ರಾಜ್ಯವಾದ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಯುವ ಶಕ್ತಿಗೆ ಉತ್ತಮ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಹೇಳಿದರು.
ಈ ವರ್ಷದ ಪ್ರದರ್ಶನದೊಂದಿಗೆ ರಕ್ಷಣಾ ಸಚಿವರ ಸಮಾವೇಶ ಮತ್ತು ಕಾರ್ಯದರ್ಶಿಗಳ ಸಭೆಯನ್ನು ಸಹ ಆಯೋಜಿಸಲಾಗುತ್ತಿದೆ. ಇದು ಸೌಹಾರ್ದ ರಾಷ್ಟ್ರಗಳ ಸಹಭಾಗಿತ್ವದಲ್ಲಿ ಏರೋ ಇಂಡಿಯಾ ಪ್ರದರ್ಶನದ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ ಎಂದು ಪ್ರಧಾನಿ ಅಭಿಪ್ರಾಯಪಟ್ಟರು.
ಏರೋ ಶೋ ಹೊಸ ಚಿಂತನೆಗಳ ಪ್ರತಿಬಿಂಬ:ಏರೋ ಇಂಡಿಯಾ ಕೇವಲ ಪ್ರದರ್ಶನವಲ್ಲ. ಇದು ಭಾರತದ ಶಕ್ತಿ ಮತ್ತು ಭಾರತದ ರಕ್ಷಣಾ ವಲಯದ ಅಭ್ಯುದಯಕ್ಕೆ ಸಾಕ್ಷಿಯಾಗಿದೆ. ಹೊಸ ಆಲೋಚನೆ ಮತ್ತು ಹೊಸ ವಿಧಾನದೊಂದಿಗೆ ದೇಶ ಮುಂದುವರಿಯುತ್ತಿದೆ. ಏರೋ ಶೋ ಭಾರತದ ಹೊಸ ಚಿಂತನೆಯನ್ನು ಬಿಂಬಿಸುತ್ತದೆ ಎಂದು ಅಭಿಪ್ರಾಯಪಟ್ಟರು.
ಏರೋ ಇಂಡಿಯಾ ಶೋ ಭಾರತದ ಅಭಿವೃದ್ಧಿಯ ಶಕೆಯಾಗಿದೆ ಎಂದು ಬಣ್ಣಿಸಿದ ಪ್ರಧಾನಿ ಮೋದಿ, ಈ ಬಾರಿಯ ಶೋನಲ್ಲಿ 100ಕ್ಕೂ ಹೆಚ್ಚು ದೇಶಗಳು ಭಾಗವಹಿಸಿರುವುದು ನವಭಾರತದ ಮೇಲೆ ವಿಶ್ವಕ್ಕಿರುವ ನಂಬಿಕೆಯನ್ನು ಪ್ರತಿಬಿಂಬಿಸುತ್ತದೆ. ಹಿಂದಿನ ಎಲ್ಲಾ ದಾಖಲೆಗಳನ್ನು ಈ ಬಾರಿಯ ಏರೋ ಶೋ ಮುರಿದಿದೆ. ಎಂಎಸ್ಎಂಇಗಳು, ಸ್ಟಾರ್ಟ್‌ಅಪ್‌ಗಳು ಮತ್ತು ವಿಶ್ವದ ಹಲವು ಕಂಪನಿಗಳು ಭಾಗವಹಿಸಿವೆ ಎಂದು ಹೇಳಿದರು.
ಕರ್ನಾಟಕಕ್ಕೆ ಮೋದಿ ಬಹುಪರಾಕ್:ಏರೋ ಇಂಡಿಯಾ ಶೋವನ್ನು ಬಹಳ ಯಶಸ್ವಿಯಾಗಿ ಆಯೋಜಿಸಿದ ರಾಜ್ಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಶ್ಲಾಘಿಸಿದರು. ಈ ಕಾರ್ಯಕ್ರಮವು ಮತ್ತೊಂದು ಕಾರಣಕ್ಕಾಗಿ ಬಹಳ ವಿಶೇಷವಾಗಿದೆ. ತಂತ್ರಜ್ಞಾನ ಲೋಕದಲ್ಲಿ ವಿಶೇಷ ಸಾಧನೆ ಮಾಡಿರುವ ಕರ್ನಾಟಕದಲ್ಲಿ ನಡೆಯುತ್ತಿದೆ. ಇದು ಏರೋಸ್ಪೇಸ್ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಹೊಸ ಬದಲಾವಣೆ ತರಲಿದೆ. ಯುವಕರಿಗೆ ಹೆಚ್ಚಿನ ಅವಕಾಶಗಳನ್ನು ನೀಡುತ್ತದೆ ಎಂದು ಪ್ರಧಾನಿ ಹೇಳಿದರು.
ಓದಿ:ಭಾರತ ವಿಶ್ವ ಗುರುವಾಗಲು ಕರ್ನಾಟಕದಿಂದ ದೊಡ್ಡ ಕೊಡುಗೆ: ಸಿಎಂ ಬಸವರಾಜ ಬೊಮ್ಮಾಯಿ