ಬೆಂಗಳೂರು:ಮೇ ತಿಂಗಳಿನಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಬಿಜೆಪಿ ಹೈಕಮಾಂಡ್ ರಂಗಪ್ರವೇಶ ಮಾಡಿದ್ದು ಮೋದಿ, ಅಮಿತ್ ಶಾ ಜೋಡಿ ಸರಣಿ ಪ್ರವಾಸದ ಮೂಲಕ ರಾಜ್ಯ ಬಿಜೆಪಿಗೆ ಬೂಸ್ಟ್ ನೀಡಲು ಮುಂದಾಗಿದ್ದಾರೆ. ಅಮಿತ್ ಶಾ ಬೆನ್ನಲ್ಲೇ ಪ್ರಧಾನಿ ಮೋದಿ ರಾಜ್ಯಕ್ಕೆ ಆಗಮಿಸಲು ಸಜ್ಜಾಗಿದ್ದಾರೆ. ಫೆಬ್ರವರಿ ತಿಂಗಳಿನಲ್ಲಿ ಮೂರು ಬಾರಿ ರಾಜ್ಯಕ್ಕೆ ಪ್ರಧಾನಿ ಮೋದಿ ಭೇಟಿ ನೀಡಲಿದ್ದಾರೆ.
ಹುಬ್ಬಳ್ಳಿ ಮತ್ತು ಬೆಳಗಾವಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಭೇಟಿ ನೀಡಿದ ಬೆನ್ನಲ್ಲೇ ರಾಜ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸುತ್ತಿದ್ದಾರೆ. ಫೆಬ್ರವರಿ 6 ರಂದು ಬೆಂಗಳೂರು ಮತ್ತು ತುಮಕೂರಿನಲ್ಲಿ ನಡೆಯಲಿರುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಕಳೆದ ಬಾರಿ ಪ್ರವಾಸದ ವೇಳೆ ಕಲ್ಯಾಣ ಕರ್ನಾಟಕದ ಮೇಲೆ ಕಣ್ಣಿಟ್ಟಿದ್ದ ಮೋದಿ ಇದೀಗ ಹಳೇ ಮೈಸೂರು ಭಾಗದ ಮೇಲೆ ಫೋಕಸ್ ಮಾಡುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಬ್ಯಾಕ್ ಟು ಬ್ಯಾಕ್ ಎಂಟ್ರಿಗೆ ಬಿಜೆಪಿ ಕಾರ್ಯಕರ್ತರು ಫುಲ್ ಖುಷ್ ಆಗಿದ್ದಾರೆ.
ಫೆಬ್ರವರಿ ಮೊದಲ ವಾರದಲ್ಲಿ ರಾಜ್ಯಕ್ಕೆ ಮೋದಿ: ಫೆ.6 ರಂದು ಬೆಳಗ್ಗೆ 8:20ಕ್ಕೆ ದೆಹಲಿಯಿಂದ ವಾಯುಪಡೆ ವಿಮಾನದ ಮೂಲಕ ಬೆಂಗಳೂರಿಗೆ ಪ್ರಯಾಣಿಸಲಿರುವ ಮೋದಿ, 10:55 ಕ್ಕೆ ಬೆಂಗಳೂರು ವಿಮಾನ ನಿಲ್ದಾಣ ತಲುಪಲಿದ್ದಾರೆ. ವಿಮಾನ ನಿಲ್ದಾಣದಿಂದ ಹೆಲಿಕ್ಯಾಪ್ಟರ್ ಮೂಲಕ ತುಮಕೂರು ರಸ್ತೆಯಲ್ಲಿರುವ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರಕ್ಕೆ ತೆರಳಲಿದ್ದಾರೆ. 11:25ಕ್ಕೆ ಇಂಡಿಯಾ ಎನರ್ಜಿ ವೀಕ್ ಕಾರ್ಯಕ್ರಮ ಉದ್ಘಾಟನೆ ಮಾಡಿಲಿರುವ ಪ್ರಧಾನಿ ಮೋದಿ, ಮಧ್ಯಾಹ್ನ 2:45 ಕ್ಕೆ ಬೆಂಗಳೂರಿನಿಂದ ಹೆಲಿಕ್ಯಾಪ್ಟರ್ ಮೂಲಕ ತುಮಕೂರು ಜಿಲ್ಲಾ ಪ್ರವಾಸಕ್ಕೆ ತೆರಳಲಿದ್ದಾರೆ.