ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನು 11 ದಿನಗಳಷ್ಟೇ ಬಾಕಿ ಉಳಿದಿದೆ. ಮತದಾರರ ಒಲಿಸಿಕೊಳ್ಳು ಎಲ್ಲ ಪಕ್ಷಗಳು ಕಸರತ್ತು ನಡೆಸುತ್ತಿವೆ. ಈ ಪೈಕಿ ಆಡಳಿತಾರೂಢ ಬಿಜೆಪಿ ಪ್ರಚಾರವನ್ನು ಚುರುಕುಗೊಳಿಸಿದ್ದು, ಈಗಾಗಲೇ ಕೇಂದ್ರ ಮತ್ತು ರಾಜ್ಯ ನಾಯಕರು ಅಭ್ಯರ್ಥಿಗಳ ಪರ ಮತ ಬೇಟೆ ಆರಂಭಿಸಿದ್ದಾರೆ. ಇನ್ನು ಕಮಲ ಕಲಿಗಳ ಪರವಾಗಿ ಖುದ್ದು ಪ್ರಧಾನಿ ನರೇಂದ್ರ ಮೋದಿಯೇ ಪ್ರಚಾರಕ್ಕೆ ಇಳಿದಿದ್ದಾರೆ. ಅಂತೆಯೇ ಇಂದಿನಿಂದ 2 ದಿನಗಳ ಕಾಲ ಮೋದಿ ರಾಜ್ಯ ಪ್ರವಾಸ ಕೈಗೊಂಡಿದ್ದಾರೆ.
ಇಂದು ಬೆಳಗ್ಗೆ ರಾಜ್ಯಕ್ಕೆ ಆಗಮಿಸುವ ಪ್ರಧಾನಿ ಮೋದಿ ಅವರು ಹುಮ್ನಾಬಾದ್, ಕುಡಚಿ, ವಿಜಯಪುರ, ಬೆಂಗಳೂರು ಉತ್ತರ ಕ್ಷೇತ್ರಗಳಲ್ಲಿ ಪ್ರಚಾರ ಕೈಗೊಳ್ಳಲಿದ್ದಾರೆ. ನಾಳೆ (ಭಾನುವಾರ) ಏ.30 ರಂದು ಕೋಲಾರ, ಬೇಲೂರು, ಚೆನ್ನಪಟ್ಟಣ್ಣ, ಮೈಸೂರಿನಲ್ಲಿ ಪಕ್ಷದ ಸಮಾವೇಶ ನಡೆಯಲ್ಲಿದ್ದು, ಮೋದಿ ಭಾಗಿಯಾಗಲಿದ್ದಾರೆ.
ಮೋದಿ ಪ್ರವಾಸ ವಿವರ:ಇಂದುಬೆಳಗ್ಗೆ ಮೋದಿ ಅವರು 8:20ಕ್ಕೆ ದೆಹಲಿ ವಿಮಾನ ನಿಲ್ದಾಣದಿಂದ ಹೊರಟು 10:20ಕ್ಕೆ ಬೀದರ್ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಳಿಕ ಹೆಲಿಕಾಪ್ಟರ್ ಮೂಲಕ ಅಲ್ಲಿಂದ 10:50 ಕ್ಕೆ ಹುಮ್ನಾಬಾದ್ದ್ಗೆ ತೆರಳಿದ್ದಾರೆ. 11 ಗಂಟೆಯಿಂದ 11:40 ರವರೆಗೂ ಹುಮ್ನಾಬಾದ್‌ನಲ್ಲಿ ನಡೆಯುವ ಸಾರ್ವಜನಿಕ ಸಭೆಯಲ್ಲಿ ಮೋದಿ ಭಾಗಿಯಾಗಲಿದ್ದಾರೆ. ನಂತರ ವಿಜಯಪುರ, ಬೆಳಗಾವಿ ಜಿಲ್ಲೆಯ ಕುಡುಚಿಯಲ್ಲಿ ಪ್ರಧಾನಿ ಮೋದಿ ಪ್ರಚಾರ ಮಾಡಲಿದ್ದಾರೆ.
ನಂತರ ಬೆಳಗಾವಿಯಿಂದ ಹೊರಟು ಸಂಜೆ 5:30 ಕ್ಕೆ ಬೆಂಗಳೂರಿನ ಹೆಚ್ಎಎಲ್ಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ಮತ ಬೇಟೆ ನಡೆಸಲಿರುವ ಮೋದಿ, ಮಾಗಡಿ ರೋಡ್ನ ನೈಸ್ ರೋಡ್ ಜಂಕ್ಷನ್ನಿಂದ ಸುಮನಹಳ್ಳಿ ಜಂಕ್ಷನ್ ವರೆಗೆ ರೋಡ್ ಶೋ ನಡೆಸಲಿದ್ದಾರೆ. ನಂತರ ರಾಜಭಾವನಕ್ಕೆ ತೆರಳಿ ರಾತ್ರಿ ಅಲ್ಲಿಯೇ ವಾಸ್ತವ್ಯ ಹೂಡಲಿದ್ದಾರೆ. ಭಾನುವಾರ ಕೋಲಾರ, ಬೇಲೂರು, ಚೆನ್ನಪಟ್ಟಣ್ಣ, ಮೈಸೂರಿನಲ್ಲಿ ಪ್ರಚಾರ ಕೈಗೊಳ್ಳಿದ್ಧಾರೆ.
ಉತ್ತರಕನ್ನಡ ಪ್ರವಾಸ, ಕಾರವಾರ: ಎರಡು ದಿನದ ಪ್ರವಾದ ಬೆನ್ನಲ್ಲೇ ಮೇ.3 ರಂದು ಪ್ರಧಾನಿ ಮೋದಿ ಮತ್ತೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಮೇ 3 ರಂದು ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆಯುವ ಬಿಜೆಪಿ ಸಮಾವೇಶದಲ್ಲಿ ಪ್ರಧಾನಿ ಭಾಗಿಯಾಗಲಿದ್ದಾರೆ. ಅಂತೆಯೇ ಸಮಾವೇಶಕ್ಕಾಗಿ ಭರ್ಜರಿ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ಚುನಾವಣೆ ಹಿನ್ನೆಲೆ ಈಗಾಗಲೇ ಪ್ರಮುಖ ಪಕ್ಷಗಳ ರಾಜ್ಯ, ರಾಷ್ಟ್ರ ನಾಯಕರು, ಸ್ಟಾರ್ ಪ್ರಚಾರಕರು ಆಗಮಿಸಿ ಆಯಾ ಪಕ್ಷಗಳ ಪರ ಪ್ರಚಾರ ನಡೆಸುತ್ತಿದ್ದಾರೆ. ಉತ್ತರಕನ್ನಡ ಜಿಲ್ಲೆಯಲ್ಲಿಯೂ ಪ್ರಚಾರ ಜೋರಾಗಿದ್ದು ಪ್ರಧಾನಿ ನರೇಂದ್ರ ಮೋದಿ ಕರೆಸಲು ಪ್ರಯತ್ನಿಸುತ್ತಿದ್ದ ಜಿಲ್ಲೆಯ ನಾಯಕರ ಪ್ರಯತ್ನ ಕೊನೆಗೂ ಕೈಗೂಡಿದೆ. ಮೇ. 3 ರಂದು ಅಂಕೋಲಾಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮನ ಬಹುತೇಕ ಖಚಿತವಾಗಿದೆ. ನೌಕಾನೆಲೆ ಜಾಗದಲ್ಲಿಯೇ ಪರವಾನಿಗೆ ಪಡೆದು ಆ ಮೂಲಕ ಸಮಾವೇಶಕ್ಕೆ ಜಿಲ್ಲಾ ಬಿಜೆಪಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದ್ದು ಬಿಜೆಪಿಗರ ಉತ್ಸಾಹ ಇನ್ನಷ್ಟು ಹೆಚ್ಚಿಸುವಂತೆ ಮಾಡಿದೆ. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳಿಂದಲೂ ಜನ ಆಗಮಿಸುವ ನಿರೀಕ್ಷೆ ಇದೆ. ಹೆಮ್ಮೆಯ ನಾಯಕನನ್ನು ಬರಮಾಡಿಕೊಳ್ಳುವುದಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳುವುದಾಗಿ ಶಾಸಕಿ ರೂಪಾಲಿನಾಯ್ಕ ತಿಳಿಸಿದ್ದಾರೆ.
ಅಂಕೋಲಾ ತಾಲೂಕಿನ ಹಟ್ಟಿಕೇರಿಯ 40 ಎಕರೆ ಖಾಲಿ ಜಾಗದಲ್ಲಿ ಮೋದಿ ಸಮಾವೇಶಕ್ಕೆ ತಯಾರಿ ನಡೆಯುತ್ತಿದೆ. ಈಗಾಗಲೇ 15ಕ್ಕೂ ಹೆಚ್ಚು ಜೆಸಿಬಿಗಳು ಸ್ಥಳದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ನೆಲ ಸಮತಟ್ಟು ಮಾಡುವ ಕಾರ್ಯ ಮಾಡಲಾಗುತ್ತಿದೆ. ಪಾರ್ಕಿಂಗ್, ಹೆಲಿಪ್ಯಾಡ್ ನಿರ್ಮಾಣ ಕಾರ್ಯ ನಡೆಯುತ್ತಿದೆ. ಒಂದೂವರೆ ಎಕರೆ ಜಾಗದಲ್ಲಿ ವೇದಿಕೆ ಸಿದ್ಧಪಡಿಸಲಾಗುತ್ತಿದೆ. ಈ ಬಗ್ಗೆ ಮಾತನಾಡಿರುವ ಬಿಜೆಪಿ ಜಿಲ್ಲಾಧ್ಯಕ್ಷ ವೆಂಕಟೇಶ ನಾಯಕ, ಒಂದು ಲಕ್ಷಕ್ಕೂ ಅಧಿಕ ಕಾರ್ಯಕರ್ತರು ಮೋದಿಯವರ ಕಾರ್ಯಕ್ರಮಕ್ಕೆ ಆಗಮಿಸುವ ನಿರೀಕ್ಷೆ ಇದೆ. ಅವರು ನಿಗದಿತ ಸಮಯ ಮಧ್ಯಾಹ್ನ 12ಕ್ಕೆ ಸರಿಯಾಗಿ ಆಗಮಿಸಲಿದ್ದು, ಅವರಿಗಿಂತ ಮುಂಚಿತವಾಗಿ ರಾಜ್ಯ ಹಾಗೂ ರಾಷ್ಟ್ರೀಯ ಹಲವು ನಾಯಕರು ಆಗಮಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಮೋದಿ, ಶಾ, ನಡ್ಡಾ ಹೇಳಿಕೆಗಳಿಗೆ ಉತ್ತರಿಸುತ್ತೇನೆ ಯತ್ನಾಳ್ ಹೇಳಿಕೆಗೆಲ್ಲಾ ಉತ್ತರ ಕೊಡಲ್ಲ: ಮಲ್ಲಿಕಾರ್ಜುನ ಖರ್ಗೆ