ಕರ್ನಾಟಕ

karnataka

By ETV Bharat Karnataka Team

Published : Oct 20, 2023, 1:38 PM IST

Updated : Oct 20, 2023, 8:01 PM IST

ETV Bharat / state

ಮೈಸೂರಿನಲ್ಲೂ ಮೆಟ್ರೋ ಸೇವೆ ಆರಂಭ: ಬೆಂಗಳೂರು ನೇರಳೆ ಮಾರ್ಗಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಪ್ರಧಾನಿ ಘೋಷಣೆ

ಬೈಯಪ್ಪನಹಳ್ಳಿ - ಕೆ ಆರ್ ಪುರ ಹಾಗೂ ಚಲ್ಲಘಟ್ಟ - ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಅ.9ರಂದು ಸಾರ್ವಜನಿಕರಿಗೆ ಮುಕ್ತವಾಗಿದ್ದು, ಇದೀಗ ಈ ವಿಸ್ತೃತ ಮಾರ್ಗವನ್ನು ವರ್ಚುಯಲ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.

ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಅಧಿಕೃತ ಚಾಲನೆ
ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಅಧಿಕೃತ ಚಾಲನೆ

ಬೆಂಗಳೂರು: ಬೆಂಗಳೂರು ಮೆಟ್ರೋ ಕೃಷ್ಣರಾಜಪುರದಿಂದ ಬೈಯ್ಯಪ್ಪನಹಳ್ಳಿ ಹಾಗೂ ಕೆಂಗೇರಿಯಿಂದ ಚಲ್ಲಘಟ್ಟದವರೆಗೆ ಎರಡು ವಿಸ್ತರಣೆಗಳ ಪೂರ್ವ-ಪಶ್ಚಿಮ ಕಾರಿಡಾರ್ ​ಅನ್ನು ಪ್ರಧಾನಿ ನರೇಂದ್ರ ಮೋದಿ ಇಂದು ವರ್ಚುಯಲ್ ಮೂಲಕ ಅಧಿಕೃತವಾಗಿ ಲೋಕಾರ್ಪಣೆ ಮಾಡಿದರು.

ವರ್ಚುವಲ್ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಗೃಹ ಕಚೇರಿ ಕೃಷ್ಣಾದಿಂದ ಪಾಲ್ಗೊಂಡರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ''ಬೆಂಗಳೂರು ಮೆಟ್ರೋ ರೈಲಿನ ಎರಡು ನೂತನ ಮಾರ್ಗಗಳ ಲೋಕಾರ್ಪಣೆ ಆಗಿದೆ. ಪ್ರತಿದಿನ ಎಂಟು ಲಕ್ಷ ಜನ ಪ್ರಯಾಣಿಸುವ ನಿರೀಕ್ಷೆ ಇದೆ. ಮೆಟ್ರೋ ರೈಲು ಮಾರ್ಗಗಳ ಆರಂಭ ಹಿನ್ನೆಲೆ ನಾನು ಕರ್ನಾಟಕದ ಜನತೆಗೆ ಅಭಿನಂದಿಸುತ್ತೇನೆ'' ಎಂದು ಹೇಳಿದರು. ''ಉತ್ತರ ಪ್ರದೇಶದಲ್ಲಿ ನೋಯ್ಡಾ, ಗಾಜಿಯಾಬಾದ್, ಲಕ್ನೋ, ಮೀರತ್, ಆಗ್ರಾ ಮತ್ತು ಕಾನ್ಪುರದಲ್ಲಿ ಮೆಟ್ರೋ ರೈಲು ಸೌಲಭ್ಯವಿದೆ. ಇನ್ನೂ ಕೆಲವೆಡೆ ಮೆಟ್ರೋ ಕಾಮಗಾರಿ ಚಾಲನೆಯಲ್ಲಿದ್ದು, ಮುಂದಿನ ದಿನಗಳಲ್ಲಿ ಸಂಚಾರ ಆರಂಭವಾಗಲಿದೆ. ಕರ್ನಾಟಕದಲ್ಲಿಯೂ ಕೂಡ ಬೆಂಗಳೂರು ಸೇರಿದಂತೆ ಮೈಸೂರಿಗೂ ಮೆಟ್ರೋ ಸೇವೆ ವಿಸ್ತರಣೆ ಮಾಡಲಾಗುವುದು'' ಎಂದು ಪ್ರಧಾನಿ ತಿಳಿಸಿದರು.

ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಅಧಿಕೃತ ಚಾಲನೆ

ಇದೇ ವೇಳೆ ವಿಡಿಯೋ ಕಾನ್ಫರೆನ್ಸ್​ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಭಾರತ ಸರ್ಕಾರ ಮತ್ತು ಕರ್ನಾಟಕ ಸರ್ಕಾರದ ಜಂಟಿ ಪ್ರಯತ್ನದಿಂದ ಪ್ರಮುಖ ಎರಡು ಮಾರ್ಗಗಳಾದ ಕೃಷ್ಣರಾಜಪುರದಿಂದ ಬೈಯಪ್ಪನಹಳ್ಳಿ ನಡುವಿನ 2.10 ಕಿ.ಮೀ.ಗಳ ಉದ್ದ ಮತ್ತು ಕೆಂಗೇರಿಯಿಂದ ಚಲ್ಲಘಟ್ಟವರೆಗಿನ 2.05 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಕ್ಟೋಬರ್ 9 ರಂದು ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಯಿತು. ಈ ಎರಡು ಪ್ರಮುಖ ಮಾರ್ಗಗಳನ್ನು ತೆರೆಯುವುದರೊಂದಿಗೆ, ನಗರ ಪೂರ್ವದಿಂದ ಪಶ್ಚಿಮಕ್ಕೆ ತಡೆ ರಹಿತ ಸಂಪರ್ಕ ಕಲ್ಪಿಸಿದೆ ಮತ್ತು ಮೆಟ್ರೋ ಜಾಲವನ್ನು 74 ಕಿ.ಮೀ.ಗಳಿಗೆ ವಿಸ್ತರಿಸಿದೆ. ಪ್ರತಿದಿನ 7 ಲಕ್ಷಕ್ಕೂ ಅಧಿಕ ಪ್ರಯಾಣಿಕರು ಸಂಚರಿಸುತ್ತಿದ್ದಾರೆ ಎಂದರು.

ಬೆಂಗಳೂರು ಮೆಟ್ರೋ ರೈಲು ಯೋಜನೆ ಹಂತ-1ರ 42.3 ಕಿ.ಮೀ.ಗಳ ಉದ್ದದ ಮಾರ್ಗವನ್ನು 14,133 ಕೋಟಿ ರೂ ವೆಚ್ಚದಲ್ಲಿ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಇತರ ಗಣ್ಯರೊಂದಿಗೆ ದೇಶಕ್ಕೆ ಸಮರ್ಪಿಸಿದರು. ಈ ಯೋಜನೆಗಾಗಿ ಕರ್ನಾಟಕ ಸರ್ಕಾರ 5,630 ಕೋಟಿ ರೂ.ಗಳಷ್ಟು ವೆಚ್ಚ ಮಾಡಿದೆ. ಬೆಂಗಳೂರು ಮೆಟ್ರೊ ರೈಲು ಯೋಜನೆ ಹಂತ-2ರಲ್ಲಿ 75.06 ಕಿ.ಮೀ.ಗಳ ಉದ್ದದ ಮಾರ್ಗ ಹೊಂದಿದ್ದು, ಈ ಯೋಜನೆಗೆ 30,695 ಕೋಟಿ ರೂ ವೆಚ್ಚವಾಗಲಿದೆ. ಈಗಾಗಲೇ ಕಾಮಗಾರಿಗಳು ಭರದಿಂದ ಸಾಗುತ್ತಿದ್ದು, 32 ಕಿ.ಮೀ.ಗಳ ಉದ್ದದ ಮಾರ್ಗವನ್ನು ಪೂರ್ಣಗೊಳಿಸಿ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲಾಗಿದೆ. ಪ್ರಸ್ತುತ ಬೆಂಗಳೂರು ಮೆಟ್ರೋ ಜಾಲದ ಕಾರ್ಯಾಚರಣೆಯು 74 ಕಿ.ಮೀ.ಗಳಿಗೆ ಏರಿಕೆಯಾಗಿದೆ ಎಂದು ಮಾಹಿತಿ ನೀಡಿದರು.

ನಾಗಸಂದ್ರದಿಂದ ಮಾದವಾರದವರೆಗಿನ ಉತ್ತರ ವಿಸ್ತರಣೆ 3.14 ಕಿ.ಮೀ.ಗಳ ಉದ್ದದ ಮಾರ್ಗವು ಮತ್ತು ಆರ್‌.ವಿ. ರಸ್ತೆಯಿಂದ ಬೊಮ್ಮಸಂದ್ರದವರೆಗೆ 19.15 ಕಿ.ಮೀ.ಗಳ ಉದ್ದದ ಹೊಸ ಮಾರ್ಗಗಳು ಮುಕ್ತಾಯದ ಹಂತದಲ್ಲಿದ್ದು, ಏಪ್ರಿಲ್ 2024ರ ವೇಳೆಗೆ ಸಾರ್ವಜನಿಕರ ಸೇವೆಗೆ ಮುಕ್ತಗೊಳಿಸಲು ಯೋಜಿಸಲಾಗಿದೆ. ಕಾಳೇನ ಅಗ್ರಹಾರದಿಂದ ನಾಗವಾರದವರೆಗಿನ 21.26 ಕಿ.ಮೀ.ಗಳ ಉದ್ದದ ಹೊಸ ಮಾರ್ಗವನ್ನು ಮಾರ್ಚ್-2025ರೊಳಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಈ ಮಾರ್ಗಗಳನ್ನು ಪೂರ್ಣಗೊಳಿಸುವುದರೊಂದಿಗೆ, ಕಾರ್ಯಾಚರಣೆಯ ಜಾಲವು 117 ಕಿ.ಮೀ.ಗಳಿಗೆ ವಿಸ್ತಾರಗೊಳ್ಳುತ್ತದೆ ಮತ್ತು 12 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿದೆ. ಹಂತ-2 ಯೋಜನೆಗಾಗಿ, ಕರ್ನಾಟಕ ಸರ್ಕಾರವು 11,583.08 ಕೋಟಿಗಳನ್ನು ಬಿಡುಗಡೆ ಮಾಡಿದೆ ಎಂದು ತಿಳಿಸಿದರು.

ವಿಸ್ತರಿತ ಮೆಟ್ರೋ ಮಾರ್ಗಕ್ಕೆ ಪ್ರಧಾನಿ ಮೋದಿ ಅಧಿಕೃತ ಚಾಲನೆ

ಇದನ್ನೂ ಓದಿ: ನಮೋ ಭಾರತ್ ಕ್ಷಿಪ್ರ ರೈಲು ಸೇವೆಗೆ ಪ್ರಧಾನಿ ಮೋದಿ ಚಾಲನೆ: ರ‍್ಯಾಪಿಡ್ ಎಕ್ಸ್ ರೈಲಿನ ವಿಶೇಷತೆ ಏನು?

ಓಆರ್‌ಆರ್-ಏರ್‌ಪೋರ್ಟ್ ಮೆಟ್ರೋ ಎಂದು ಕರೆಯಲ್ಪಡುವ 58 ಕಿ.ಮೀ.ಗಳ ಉದ್ದದ ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್‌ನಿಂದ ಹೆಬ್ಬಾಳ ಜಂಕ್ಷನ್ ಮೂಲಕ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಹಂತ 2ಎ ಮತ್ತು 2ಬಿ ಯೋಜನೆಯನ್ನು ಅಂದಾಜು 14788.1 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲಾಗುತ್ತಿದ್ದು, 2026ರ ವೇಳೆಗೆ ಪೂರ್ಣಗೊಳಿಸಲು ಯೋಜಿಸಲಾಗಿದೆ. ಕರ್ನಾಟಕ ಸರ್ಕಾರವು ಇದುವರೆಗೆ 4775.36 ಕೋಟಿ ಬಿಡುಗಡೆ ಮಾಡಿದೆ. ಈ ಯೋಜನೆಯು ಪೂರ್ಣಗೊಂಡ ನಂತರ, ಮೆಟ್ರೋ ಜಾಲವು 176 ಕಿ.ಮೀ.ಗಳು ಆಗಲಿದೆ ಮತ್ತು ಪ್ರತಿದಿನ ಸುಮಾರು 20 ಲಕ್ಷ ಪ್ರಯಾಣಿಕರು ಸಂಚರಿಸಲಿದ್ದಾರೆ. ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಬೆಂಗಳೂರು ಮೆಟ್ರೊ ರೈಲು ಯೋಜನೆಯ 3ನೇ ಹಂತದಲ್ಲಿ 45 ಕಿ.ಮೀ.ಗಳ ಉದ್ದದ ಮಾರ್ಗವನ್ನು ಅಂದಾಜು 15,611 ಕೋಟಿಗಳ ವೆಚ್ಚದಲ್ಲಿ ನಿರ್ಮಿಸಲು ಡಿಪಿಆರ್‌ನ್ನು ಕರ್ನಾಟಕ ಸರ್ಕಾರ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಸಲ್ಲಿಸಲಾಗಿದೆ. ಈ ಯೋಜನೆಗೆ ಶೀಘ್ರವಾಗಿ ಅನುಮೋದನೆ ನೀಡುವಂತೆ ಪ್ರಧಾನ ಮಂತ್ರಿಯವರನ್ನು ಕೋರಿದರು.

ಸರ್ಜಾಪುರದಿಂದ ಹೆಬ್ಬಾಳದವರೆಗಿನ 37 ಕಿ.ಮೀ.ಗಳ ಉದ್ದದ ಬೆಂಗಳೂರು ಮೆಟ್ರೋ ರೈಲು ಯೋಜನೆಯ ಹಂತ-3ಎಗೆ ಡಿಪಿಆರ್ ತಯಾರಿಸಲಾಗುತ್ತಿದೆ. ಬೆಂಗಳೂರು ನಗರವು ವೇಗವಾಗಿ ಬೆಳೆಯುತ್ತಿದ್ದು, ಕರ್ನಾಟಕ ಸರ್ಕಾರವು 2031ರ ವೇಳೆಗೆ 317 ಕಿ.ಮೀ.ಗಳ ಮೆಟ್ರೋ ಮಾರ್ಗಗಳನ್ನು ನಿರ್ಮಿಸಲು ಸಿಎಂಪಿ ಪ್ಲಾನ್‌ನಲ್ಲಿ ಅನುಮೋದಿಸಿದೆ. ಈಗಾಗಲೇ 257 ಕಿ.ಮೀ.ಗಳ ಮಾರ್ಗವು ಕಾರ್ಯಾಚರಣೆ, ನಿರ್ಮಾಣ ಮತ್ತು ಯೋಜನೆ ಹಂತದಲ್ಲಿದೆ. ಇನ್ನುಳಿದ 60 ಕಿ.ಮೀ.ಗಳ ಮೆಟ್ರೊ ಮಾರ್ಗಗಳ ಕಾರ್ಯಸಾಧ್ಯತೆಯ ಸಮೀಕ್ಷೆಯನ್ನು ಶೀಘ್ರದಲ್ಲೇ ಕೈಗೊಳ್ಳಲಾಗುವುದು ಎಂದರು.

ಕೆ.ಆರ್‌.ಪುರದಿಂದ ವೈಟ್‌ಫೀಲ್ಡ್‌ ವರೆಗೆ ಕಳೆದ ಮಾರ್ಚ್‌ನಿಂದ ಮೆಟ್ರೋ ಸಂಚಾರವಿತ್ತಾದರೂ ಈ ವಿಭಾಗ ಸಂಪರ್ಕಿಸಲು ಬೈಯ್ಯಪ್ಪನಹಳ್ಳಿಯಿಂದ ಕೆ.ಆರ್‌.ಪುರದವರೆಗೆ ಮಾರ್ಗ ಸಂಪರ್ಕ ಕಾಮಗಾರಿ ಪೂರ್ಣವಾಗಿರಲಿಲ್ಲ. ಇದರಿಂದ 2.10 ಕಿ.ಮೀ. ಅಂತರ ಕ್ರಮಿಸಲು ಫೀಡರ್‌ ಬಸ್‌, ಖಾಸಗಿ ವಾಹನ ಅವಲಂಭಿಸಬೇಕಾಗಿತ್ತು. ಮೆಟ್ರೋ ರೈಲ್ವೆ ಸುರಕ್ಷತಾ ಆಯುಕ್ತರು (ಸಿಎಂಆರ್‌ಎಸ್‌) ಸೆಪ್ಟೆಂಬರ್ 25ರಂದು ಬೈಯ್ಯಪ್ಪನಹಳ್ಳಿ-ಕೆ.ಆರ್.ಪುರಂ ಮತ್ತು ಸೆ.30ರಂದು ಕೆಂಗೇರಿ-ಚಲ್ಲಘಟ್ಟ ಮಾರ್ಗಕ್ಕೆ ಅನುಮತಿ ನೀಡಿದ್ದರೂ ಸಹ ಸಂಚಾರ ಆರಂಭವಾಗಿರಲಿಲ್ಲ. ಇದರಿಂದ ಮೆಟ್ರೋ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು.

ಇತ್ತ ಈ ಮಾರ್ಗ ಉದ್ಘಾಟನೆ ಸಂಬಂಧ ರಾಜ್ಯ ಹಾಗೂ ಕೇಂದ್ರ ಸರ್ಕಾರ ಜಿದ್ದಿಗೆ ಬಿದ್ದಿದ್ದರಿಂದ ರೈಲು ಸಂಚಾರ ವಿಳಂಬವಾಗಿತ್ತು.‌ ಬಳಿಕ ಕೇಂದ್ರ ಸರ್ಕಾರ ಈ ಹೊಸ ಮೆಟ್ರೋ ಮಾರ್ಗಗಳನ್ನು ಅನೌಪಚಾರಿಕವಾಗಿ ಸಾರ್ವಜನಿಕರಿಗೆ ಮುಕ್ತಗೊಳಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು. ಅಧಿಕೃತ ಉದ್ಘಾಟನೆಯನ್ನು ಬಳಿಕ ಮಾಡಲಾಗುವುದು ಎಂದು ತಿಳಿಸಿತ್ತು‌‌. ಅದರಂತೆ ಬಹುನಿರೀಕ್ಷಿತ ಬೈಯಪ್ಪನಹಳ್ಳಿ-ಕೆಆರ್ ಪುರ ಹಾಗೂ ಚಲ್ಲಘಟ್ಟ- ಕೆಂಗೇರಿ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಅ.9ರಂದು ಸಾರ್ವಜನಿಕರಿಗೆ ಮುಕ್ತವಾಗಿತ್ತು. ಯಾವುದೇ ಔಪಚಾರಿಕ ಉದ್ಘಾಟನೆಯಿಲ್ಲದೆ ನೇರವಾಗಿ ಕಾರ್ಯಾಚರಣೆ ಪ್ರಾರಂಭವಾಗಿತ್ತು. ಇದೀಗ ಪ್ರಧಾನಿ ‌ಮೋದಿ ಈ ಹೊಸ ವಿಸ್ತರಿತ ಮಾರ್ಗಗಳನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಿದ್ದಾರೆ.

ಇದನ್ನೂ ಓದಿ: Bengaluru Purple Line metro: ವೈಟ್​ಫೀಲ್ಡ್ - ಚಲ್ಲಘಟ ಮಧ್ಯೆ ಮೆಟ್ರೋ ಸೇವೆ ಆರಂಭ.. ಹೀಗಿದೆ ಟಿಕೆಟ್ ದರ, ವೇಳಾಪಟ್ಟಿ

Last Updated : Oct 20, 2023, 8:01 PM IST

ABOUT THE AUTHOR

...view details