ಬೆಂಗಳೂರು:ಹಿಂದೂ ಫೈರ್ ಬ್ರ್ಯಾಂಡ್, ಖಡಕ್ ಮಹಿಳಾ ಸಂಸದೆ, ಆರ್ಎಸ್ಎಸ್ ಹಿನ್ನೆಲೆ.. ಹೀಗೆ ಹತ್ತು ಹಲವು ಕಾರಣಗಳಿಂದಾಗಿ ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ ಅವರಿಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಲಭಿಸಿದೆ. ಇದರ ಹಿಂದೆ ಹೈಕಮಾಂಡ್ ಹಲವು ಲೆಕ್ಕಾಚಾರ ಹಾಕಿರುವ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ.
2014ರಲ್ಲಿ ಮೊದಲ ಬಾರಿ ನರೇಂದ್ರ ಮೋದಿ ಪ್ರಧಾನಿಯಾದ ವೇಳೆ ರಾಜ್ಯದ ಕರಾವಳಿ ಭಾಗದ ನಾಯಕ, ಖಡಕ್ ಹಿಂದೂ ಫೈರ್ ಬ್ರ್ಯಾಂಡ್ ಆಗಿದ್ದ ಉತ್ತರ ಕನ್ನಡ ಸಂಸದ ಅನಂತಕುಮಾರ್ ಹೆಗಡೆಗೆ ಸಂಪುಟದಲ್ಲಿ ಸ್ಥಾನ ನೀಡಲಾಗಿತ್ತು. ಉತ್ತಮ ವಾಗ್ಮಿ, ಕರಾವಳಿಯಲ್ಲಿ ಹಿಂದೂ ಪರ ದನಿಯಿಂದಲೇ ಪಕ್ಷಕ್ಕೆ ನೆಲೆ ಕಲ್ಪಿಸುವಲ್ಲಿ ಸಫಲರಾಗಿದ್ದರು, ಸಚಿವರಾಗಿ ಸೋತರೂ ಸಂಘಟನಾ ಶಕ್ತಿಯಲ್ಲಿ ಗೆದ್ದಿದ್ದರು. ಹಾಗಾಗಿ ಈ ಬಾರಿಯೂ ಅಂತಹ ಹಿಂದೂ ಫೈರ್ ಬ್ರ್ಯಾಂಡ್ ಕರಾವಳಿ ಭಾಗಕ್ಕೆ ಅಗತ್ಯ ಎನ್ನುವುದನ್ನು ಮನಗಂಡು ಸಂಸದೆ ಶೋಭಾ ಕರಂದ್ಲಾಜೆ ಅವಕಾಶ ಕಲ್ಪಿಸಲಾಗಿದೆ ಎನ್ನಲಾಗಿದೆ.
ಉಡುಪಿ-ಚಿಕ್ಕಮಗಳೂರು ಸಂಸದೆಯಾಗಿರುವ ಶೋಭಾ ಕರಂದ್ಲಾಜೆ, ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯದ ವಿರುದ್ಧ ನಿರಂತರವಾಗಿ ಹೋರಾಟ ಮಾಡಿಕೊಂಡು ಬಂದಿದ್ದಾರೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆ, ಹಿಂಸಾಚಾರದ ವಿರುದ್ಧ ಹೋರಾಟ ನಡೆಸಿದ್ದು, ಗಟ್ಟಿ ದನಿ ಮೂಲಕ ದೇಶದ ಗಮನ ಸೆಳೆದಿದ್ದರು. ಈ ಹೋರಾಟ ಹೈಕಮಾಂಡ್ ನಾಯಕರನ್ನು ಸೆಳೆಯುವಲ್ಲಿಯೂ ಸಫಲವಾಗಿತ್ತು. ಅಲ್ಲದೇ ಸದಾನಂದಗೌಡರು ನಿರಾಕರಿಸಿದ ಕ್ಷೇತ್ರದಲ್ಲಿ ಸ್ಪರ್ಧಿಸಿ ಸತತ ಎರಡು ಬಾರಿ ಗೆಲುವು ಸಾಧಿಸಿದ್ದು ಕೂಡ ಪ್ಲಸ್ ಪಾಯಿಂಟ್ ಆಗಿದೆ.
ಆರ್ಎಸ್ಎಸ್ ಪ್ರಭಾವದಿಂದಾಗಿ ಸಂಘ ಪರಿವಾರದ ಕಾರ್ಯಕರ್ತೆಯಾಗಿ ಸೇವೆ ಸಲ್ಲಿಸಿ ಸಂಘದ ತತ್ವ ಸಿದ್ಧಾಂತದಂತೆ ನಡೆದುಕೊಂಡು ಸಂಘಟನೆಯಿಂದ ಪಕ್ಷಕ್ಕೆ ಬಡ್ತಿ ಪಡೆದುಕೊಂಡರು. 2004ರಲ್ಲಿ ಪರಿಷತ್ ಸದಸ್ಯರಾಗಿ ಆಯ್ಕೆಯಾಗುವಲ್ಲಿಯೂ ಆರ್ಎಸ್ಎಸ್ ಪ್ರಭಾವ ಇದ್ದು, ಶೋಭಾ ಕರಂದ್ಲಾಜೆ ಅವರ ರಾಜಕೀಯ ಜೀವನಕ್ಕೆ ಇದು ಮಹತ್ವದ ತಿರುವು ನೀಡಿತು. ಭವಿಷ್ಯದಲ್ಲಿ ರಾಜ್ಯ ಸಚಿವ ಸಂಪುಟಕ್ಕೆ ಸೇರುವ ಜೊತೆಗೆ ಇದೀಗ ಕೇಂದ್ರ ಸಂಪುಟದವರೆಗೂ ಕರೆತಂದಿದೆ.
ಸಂಪುಟ ಸ್ಥಾನದ ಹಿಂದಿದೆ ಈ ಇಬ್ಬರ ಪಾತ್ರ:
ಶೋಭಾ ಕರಂದ್ಲಾಜೆಗೆ ಕೇಂದ್ರ ಸಂಪುಟದಲ್ಲಿ ಸ್ಥಾನ ಸಿಗಲು ಇಬ್ಬರು ವ್ಯಕ್ತಿಗಳ ಪಾತ್ರ ಇದೆ ಎನ್ನುವ ಮಾತುಗಳು ಕೇಳಿಬಂದಿವೆ. ಆರ್ಎಸ್ಎಸ್ನ ದಕ್ಷಿಣ ಮಧ್ಯ ಕ್ಷೇತ್ರದ ಕ್ಷೇತ್ರೀಯ ಸಂಘಚಾಲಕ ವಿ.ನಾಗರಾಜ್ ಮತ್ತು ಆರ್ಎಸ್ಎಸ್ ಸಹ ಸರಕಾರ್ಯವಾಹ ಸಿ.ಆರ್ ಮುಕುಂದ್, ಶೋಭಾ ಕರಂದ್ಲಾಜೆ ಪರ ಒಲವು ಹೊಂದಿದ್ದು ರಾಜ್ಯದ ಕರಾವಳಿ ಮತ್ತು ಮಲೆನಾಡಿನಲ್ಲಿ ಆರ್ಎಸ್ಎಸ್ ಶಕ್ತಿ ಹೆಚ್ಚಿಸಲು ಶೋಭಾ ಕರಂದ್ಲಾಜೆ ಸೂಕ್ತ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಸಂಘ ಹಾಗು ಸಂಘಟನೆ ಹಿನ್ನೆಲೆ ಮತ್ತು ಸಂಘದ ಚಟುವಟಿಕೆಗೆ ಪೂರಕ ಎನ್ನವ ಕಾರಣ ಮತ್ತು ಭವಿಷ್ಯದ ಚುನಾವಣಾ ದೃಷ್ಟಿಯಿಂದಲೂ ಶೋಭಾ ಕರಂದ್ಲಾಜೆಗೆ ಸಚಿವ ಸ್ಥಾನ ನೀಡಲಾಗಿದೆ ಎನ್ನಲಾಗುತ್ತಿದೆ.
ಇನ್ನು ಈ ಬಾರಿ ಕೇಂದ್ರ ಸಂಪುಟದಲ್ಲಿದ್ದ ರಾಜ್ಯದ ಏಕೈಕ ಒಕ್ಕಲಿಗ ಸಚಿವ ಸದಾನಂದಗೌಡರನ್ನು ಕೈಬಿಟ್ಟ ಕಾರಣದಿಂದ ಹಳೆ ಮೈಸೂರು ಭಾಗದಲ್ಲಿ ಹೆಚ್ಚಿನ ಪ್ರಾಬಲ್ಯ ಹೊಂದಿರುವ ಒಕ್ಕಲಿಗ ಸಮುದಾಯದ ಕೆಂಗಣ್ಣಿಗೆ ಗುರಿಯಾಗದೆ ಇರಲು ಅದೇ ಸಮುದಾಯಕ್ಕೆ ಸಚಿವ ಸ್ಥಾನ ನೀಡಲಾಗಿದೆ. ಒಂದು ಕಡೆ ಒಕ್ಕಲಿಗರಿಗೆ ಅವಕಾಶ ಮತ್ತೊಂದು ಕಡೆ ಹಿಂದೂ ಫೈರ್ ಬ್ರ್ಯಾಂಡ್.. ಹೀಗೆ ಎರಡೂ ಕಡೆಯಿಂದಲೂ ಸೂಕ್ತ ಎನ್ನುವ ಕಾರಣಕ್ಕೆ ಶೋಭಾ ಕರಂದ್ಲಾಜೆಗೆ ಮೋದಿ ಸಂಪುಟದಲ್ಲಿ ಅವಕಾಶ ಸಿಕ್ಕಿದೆ ಎನ್ನಲಾಗುತ್ತಿದೆ.
ಇನ್ನು ಮೊದಲಿನಿಂದಲೂ ಯಡಿಯೂರಪ್ಪ ಬೆಂಬಲಕ್ಕೆ ನಿಂತಿರುವ ಶೋಭಾ ಕರಂದ್ಲಾಜೆ, ಹಿಂದೆ ಬಿಎಸ್ವೈ ಸಂಪುಟದಲ್ಲಿ ಎರಡು ಬಾರಿ ಸಚಿವ ಸ್ಥಾನ ಪಡೆದುಕೊಂಡಿದ್ದರು, ನಂತರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಯಡಿಯೂರಪ್ಪ ಜೊತೆ ಕೆಜೆಪಿಗೆ ಸೇರಿದ್ದರು. ಯಡಿಯೂರಪ್ಪ ವಾಪಸ್ ಬಿಜೆಪಿಗೆ ಬಂದಾಗ ಅವರೊಂದಿಗೆ ಬಿಜೆಪಿಗೆ ಮರಳಿದ್ದರು. ಸಂಸತ್ ಸ್ಥಾನಕ್ಕೆ ಸ್ಪರ್ಧಿಸಿದ ಮೊದಲ ಚುನಾವಣೆಯಲ್ಲೇ ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಆಯ್ಕೆಯಾದರು.
ಅವರ ರಾಜ್ಯ ರಾಜಕೀಯ ಪ್ರವೇಶಕ್ಕೆ ರಾಜ್ಯ ನಾಯಕರ ವಿರೋಧ ಇದ್ದ ಕಾರಣಕ್ಕೆ ಕೇಂದ್ರದಲ್ಲೇ ಮುಂದುವರೆದಿರುವ ಶೋಭಾ ಕರಂದ್ಲಾಜೆ ಅವರಿಗೆ ಈಗ ಕೇಂದ್ರ ಸಂಪುಟದಲ್ಲಿ ಸ್ಥಾನ ಕಲ್ಪಿಸಲಾಗಿದೆ. ಯಡಿಯೂರಪ್ಪ ಆಪ್ತ ಬಳಗ ಎನ್ನುವುದು ಒಂದು ಕಾರಣವಾದರೆ, ಭವಿಷ್ಯದ ರಾಜಕೀಯದಲ್ಲಿ ಯಡಿಯೂರಪ್ಪ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಬದಲಾಯಿಸಬೇಕಾದ ಸನ್ನಿವೇಶ ಎದುರಾದಲ್ಲಿ ಪರಿಸ್ಥಿತಿ ನಿಯಂತ್ರಿಸಲು ಈ ತಂತ್ರ ರೂಪಿಸಲಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ. ಯಡಿಯೂರಪ್ಪ ಎದುರು ನೇರವಾಗಿ ಮಾತನಾಡುವ ಕೆಲವೇ ಕೆಲವು ವ್ಯಕ್ತಿಗಳಲ್ಲಿ ಶೋಭಾ ಕರಂದ್ಲಾಜೆ ಒಬ್ಬರಾಗಿದ್ದು ಅಳೆದು ತೂಗಿ ಹಲವು ಆಯಾಮದ ಆಧಾರದಲ್ಲಿ ಶೋಭಾ ಕರಂದ್ಲಾಜೆ ಅವರಿಗೆ ಅವಕಾಶ ಕಲ್ಪಿಸಲಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಒಟ್ಟಿನಲ್ಲಿ ಖಡಕ್ ಹಿಂದೂ ಫೈರ್ ಬ್ರ್ಯಾಂಡ್,ಬಿಎಸ್ವೈ ಬೆಂಬಲ, RSS ಹಿನ್ನೆಲೆ ಶೋಭಾ ಕರಂದ್ಲಾಜೆ ಅವರ ರಾಜಕೀಯ ಜೀವನವನ್ನು ರಾಷ್ಟ್ರಮಟ್ಟಕ್ಕೆ ಕೊಂಡೊಯ್ದಿದೆ. ಕೇಂದ್ರದ ಕೃಷಿ ಖಾತೆ ರಾಜ್ಯ ಸಚಿವೆ ಸ್ಥಾನದೊಂದಿಗೆ ಮೋದಿ ಸಂಪುಟ ಸೇರಿದ್ದಾರೆ.