ಬೆಂಗಳೂರು:ರಾಜ್ಯ ವಿಧಾನಸಭಾ ಚುನಾವಣಾ ಪ್ರಚಾರದ ಕಣ ರಂಗೇರಿದ್ದು, ಏಪ್ರಿಲ್ 29 ರಿಂದ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಪ್ರಚಾರ ಕಾರ್ಯ ಆರಂಭವಾಗಲಿದೆ. ಒಟ್ಟು 6 ದಿನ ರಾಜ್ಯದಲ್ಲಿ ಪ್ರವಾಸ ಮಾಡಲಿರುವ ಪಿಎಂ 23 ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ. ವಲಯವಾರು ಆದ್ಯತೆ ಮೇರೆಗೆ ಹಳೇ ಮೈಸೂರು, ಕಿತ್ತೂರ ಕರ್ನಾಟಕ, ಕಲ್ಯಾಣ ಕರ್ನಾಟಕ, ಮಧ್ಯ ಕರ್ನಾಟಕ ಕೇಂದ್ರಿತ ಪ್ರವಾಸ ಮಾಡಲಿದ್ದಾರೆ.
ಏಪ್ರಿಲ್ 29 ರಂದು 11.00 ರಿಂದ 11.40 ರವರೆಗೆ ಹುಮ್ನಾಬಾದ್ನಲ್ಲಿ ಸಾರ್ವಜನಿಕ ಸಭೆ, ಮಧ್ಯಾಹ್ನ 1 ರಿಂದ 1.40 ರವರೆಗೆ ವಿಜಯಪುರದಲ್ಲಿ ಸಾರ್ವಜನಿಕ ಸಭೆ, 2.45 ರಿಂದ 3.25 ರವರೆಗೆ ಕುಡಚಿ ಕ್ಷೇತ್ರಗಳಲ್ಲಿ ಬಹಿರಂಗ ಸಮಾವೇಶ ಸಭೆಯಲ್ಲಿ ಭಾಗಿಯಾಗಲಿದ್ದಾರೆ. ಸಂಜೆ 6.15 ರಿಂದ 7 ಗಂಟೆವರೆಗೆ ಬೆಂಗಳೂರಿನಲ್ಲಿ ರೋಡ್ ಶೋ, ಯಶವಂತಪುರ ಕ್ಷೇತ್ರದ ನೈಸ್ ಜಂಕ್ಷನ್ನಿಂದ ಸುಮನಹಳ್ಳಿ ಜಂಕ್ಷನ್ ವರೆಗೆ ಮೋದಿ ರೋಡ್ ಶೋ ನಡೆಸಲಿದ್ದಾರೆ. ನಂತರ ರಾಜಭವನದಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಏಪ್ರಿಲ್ 30 ರಂದು ಮೋದಿಯವರ ಮುಂದುವರೆದ ಪ್ರಚಾರ ಕಾರ್ಯಕ್ರಮ ನಡೆಯಲಿದ್ದು, 11.30 ರಿಂದ 12.15 ರವರೆಗೆ ಕೋಲಾರದಲ್ಲಿ ನಡೆಯುವ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮೋದಿ ಭಾಷಣ ಮಾಡಲಿದ್ದಾರೆ. 1.30 ರಿಂದ 2.15 ರವರೆಗೆ ಚನ್ನಪಟ್ಟಣದಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ. 3.45 ರಿಂದ 4.15 ರವರೆಗೆ ಬೇಲೂರಿನಲ್ಲಿ ನಡೆಯುವ ಬಹಿರಂಗ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಕ್ಷೇತ್ರಗಳಲ್ಲಿ ಪ್ರಧಾನಿ ಸಾರ್ವಜನಿಕ ಬಹಿರಂಗ ಸಮಾವೇಶ ಸಂಜೆ ಮೈಸೂರಿನಲ್ಲಿ ಸಂಜೆ 5.45 ರಿಂದ 6.30 ರವರೆಗೆ ಭರ್ಜರಿ ರೋಡ್ ಶೋ ನಡೆಸಲಿದ್ದಾರೆ. ಮೈಸೂರು ರೋಡ್ ಶೋ ಮುಗಿಸಿ ದೆಹಲಿಗೆ ವಾಪಸ್ ಆಗಲಿದ್ದಾರೆ.