ಬೆಂಗಳೂರು:ರಾಜ್ಯ ವಿಧಾನಸಭೆ ಚುನಾವಣೆಯ ಮತದಾನಕ್ಕೆ ಇನ್ನು 5 ದಿನಗಳ ಮಾತ್ರ ಬಾಕಿ ಉಳಿದಿವೆ. ಹೀಗಾಗಿ ಚುನಾವಣಾ ಪ್ರಚಾರದ ಕಾವು ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಒಂದೆಡೆ ಕಾಂಗ್ರೆಸ್ ಪಕ್ಷವನ್ನು ಶತಾಯಗತಾಯ ಅಧಿಕಾರದ ಗದ್ದುಗೆಗೇರಿಸಲೇ ಬೇಕು ಎಂದು ಅಭ್ಯರ್ಥಿಗಳ ಪರ ಗಾಂಧಿ ಪರಿವಾರವೇ ಅಖಾಡಕ್ಕೆ ಧುಮುಕಿ ಪ್ರಚಾರ ನಡೆಸುತ್ತಿದ್ದಾರೆ. ಮತ್ತೊಂದೆಡೆ, ಬಿಜೆಪಿ ಈ ಬಾರಿ ಸ್ಪಷ್ಟ ಬಹುಮತದೊಂದಿಗೆ ಸರ್ಕಾರ ರಚಿಸಲು ಸಾಕಷ್ಟು ಕಸರತ್ತು ನಡೆಸುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ, ಕೇಂದ್ರ ನಾಯಕರ ದಂಡೇ ಕರ್ನಾಟಕ ಚುನಾವಣಾ ಕುರುಕ್ಷೇತ್ರಕ್ಕಿಳಿದು ಮಿಂಚಿನ ಮತಬೇಟೆ ನಡೆಸುತ್ತಿದ್ದಾರೆ.
ಇಂದಿನಿಂದ 3 ದಿನಗಳ ಕಾಲ ಪ್ರಧಾನಿ ಮೋದಿ ರಾಜ್ಯದಲ್ಲಿಯೇ ಮೊಕ್ಕಾಂ ಹೂಡಲಿದ್ದು ಹಲವು ಜಿಲ್ಲೆಗಳಲ್ಲಿ ರೋಡ್ ಶೋ, ಸಮಾವೇಶದ ಮೂಲಕ ಮತ ಯಾಚನೆ ನಡೆಸಲಿದ್ದಾರೆ. ಇಂದು (ಶುಕ್ರವಾರ) ದೆಹಲಿಯಿಂದ ರಾಜ್ಯಕ್ಕೆ ಆಗಮಿಸಲಿರುವ ಅವರು, ಮಧ್ಯಾಹ್ನ 2 ಗಂಟೆಗೆ ಬಳ್ಳಾರಿ ಹಾಗೂ 4:30ಕ್ಕೆ ತುಮಕೂರು ಗ್ರಾಮಾಂತರದಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ.
ಬಳ್ಳಾರಿ ಸಮಾವೇಶಕ್ಕೆ ಮಳೆ ಆತಂಕ: ಬಳ್ಳಾರಿಯ ಕಪಗಲ್ಲು ರಸ್ತೆಯಲ್ಲಿ ಮೋದಿ ಸಾರ್ವಜನಿಕ ಸಮಾವೇಶ ನಡೆಯಲಿದ್ದು ಈಗಾಗಲೇ ಎಲ್ಲಾ ಸಿದ್ದತೆಗಳನ್ನು ಮಾಡಲಾಗಿದೆ. ಆದರೆ ನಿನ್ನೆ ರಾತ್ರಿ ಸುರಿದ ಅನಿರೀಕ್ಷಿತ ಮಳೆಯಿಂದಾಗಿ ಕಾರ್ಯಕ್ರಮದ ಸ್ಥಳ ಕೆಸರುಮಯವಾಗಿದೆ. ಮೋಡ ಕವಿದ ವಾತಾವರಣ ಇರುವುದರಿಂದ ಕಾರ್ಯಕ್ರಮಕ್ಕೆ ಮಳೆ ಆತಂಕ ಎದುರಾಗಿದೆ. ಮಳೆಯಿಂದ ಒದ್ದೆಯಾಗಿರುವ ವೇದಿಕೆಯನ್ನು ಸಿಬ್ಬಂದಿ ಸರಿಪಡಿಸುತ್ತಿದ್ದಾರೆ. ಕಾರ್ಯಕರ್ತರಿಗಾಗಿ ಸುಮಾರು 80 ಸಾವಿರ ಆಸನಗಳ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳ ಸುಮಾರು 1.5 ರಿಂದ 2 ಲಕ್ಷ ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ.