ಕರ್ನಾಟಕ

karnataka

ETV Bharat / state

ಪ್ರಧಾನಿಯಿಂದ ಕಿಸಾನ್ ಸಮ್ಮಾನ್ ಯೋಜನೆಯ 7ನೇ ಕಂತು ಬಿಡುಗಡೆ: ಈವರೆಗೆ ರಾಜ್ಯದ ರೈತರ ಕೈಸೇರಿದ ಸಹಾಯಧನ ಎಷ್ಟು ಗೊತ್ತಾ? - M-Kisan scheme

ಕೇಂದ್ರ ಸರ್ಕಾರದ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಮೂಲಕ ಇಂದು ದೇಶದ ಸುಮಾರು ಒಂಬತ್ತು ಕೋಟಿ ರೈತರಿಗೆ ತಲಾ 2 ಸಾವಿರ ರೂಪಾಯಿ 7ನೇ ಕಂತಿನ ಹಣ ಜಮೆಯಾಗಲಿದೆ. 2018ರ ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಕಿಸಾನ್ ಸಮ್ಮಾನ್ ನಿಧಿ ಯೋಜನೆ ಜಾರಿಗೆ ತಂದಿದ್ದು ಇಂದು 7ನೇ ಕಂತಿನ ಹಣವನ್ನು ದೇಶದ ರೈತರ ಖಾತೆಗೆ ನೇರ ಜಮೆ ಮಾಡಲಿದೆ.

PM Kisan Samman Nidhi Scheme: 7th installment release from Modi
ಕಿಸಾನ್ ಸಮ್ಮಾನ್ ಯೋಜನೆಯ 7ನೇ ಕಂತು ಬಿಡುಗಡೆ

By

Published : Dec 25, 2020, 3:56 AM IST

ಬೆಂಗಳೂರು: ಇಂದು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಯೋಜನೆಯ 7ನೇ ಕಂತಿನ ಹಣ ಮಧ್ಯಾಹ್ನ 12 ಗಂಟೆಗೆ ದೇಶದ 9 ಕೋಟಿ ರೈತರ ಖಾತೆಗೆ ಜಮೆಯಾಗಲಿದೆ. ಈ ಹಿನ್ನೆಲೆ ರಾಜ್ಯದಲ್ಲಿ ಈವರೆಗೆ ಎಷ್ಟು ರೈತರ ಖಾತೆಗೆ ಕಿಸಾನ್ ಸಮ್ಮಾನ್ ಸಹಾಯಧನ ಜಮೆಯಾಗಿದೆ ಎಂಬುದರ ಸಮಗ್ರ ವರದಿ ಇಲ್ಲಿದೆ.

ಶುಕ್ರವಾರ ಪ್ರಧಾನಿ ನರೇಂದ್ರ ಮೋದಿಯವರು ಮಧ್ಯಾಹ್ನ 12 ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಬಟನ್​ ಒತ್ತುವ ಮೂಲಕ ಕಿಸಾನ್ ಸಮ್ಮಾನ್ ಯೋಜನೆಯಡಿ ಏಳನೇ ಕಂತು 18 ಸಾವಿರ ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ನೋಂದಾಯಿಸಿದ ದೇಶದ ಸುಮಾರು ಒಂಬತ್ತು ಕೋಟಿ ರೈತರಿಗೆ ತಲಾ 2 ಸಾವಿರ ರೂಪಾಯಿ 7ನೇ ಕಂತಿನ ಹಣ ಜಮೆಯಾಗಲಿದೆ.

ಇದನ್ನೂ ಓದಿ : ಕೃಷಿ ಕಾಯ್ದೆಗಳನ್ನು ರಾತ್ರೋರಾತ್ರಿ ಪರಿಚಯಿಸಿಲ್ಲ, 20-30 ವರ್ಷ ಚರ್ಚಿಸಿದ್ದೇವೆ: ವಿಪಕ್ಷಗಳಿಗೆ ನಮೋ ತಿರುಗೇಟು

2018ರ ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಅಡಿ ಕೇಂದ್ರವು ರೈತರ ಖಾತೆಗಳಿಗೆ ವರ್ಷದಲ್ಲಿ 2,000 ರೂ.ದಂತೆ ಮೂರು ಸಮಾನ ಕಂತುಗಳಲ್ಲಿ ತಲಾ 6,000‌ ರೂ. ಸಹಾಯಧನ ರೈತರ ಖಾತೆಗಳಿಗೆ ಜಮೆ ಮಾಡುತ್ತದೆ. 2,000 ರೂ.‌ನಂತೆ ಮೂರು ಸಮಾನಾಂತರ ಕಂತಿನಲ್ಲಿ ಸಹಾಯಧನವನ್ನು ಜಮೆ‌ ಮಾಡಲಾಗುತ್ತದೆ. ಇತ್ತ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಕಳೆದ ಜುಲೈನಲ್ಲಿ ಈ ಯೋಜನೆ ಅಡಿ ರೈತರಿಗೆ ವಾರ್ಷಿಕ 4,000 ರೂ. ಹೆಚ್ಚುವರಿ ಹಣ ನೀಡಲು ನಿರ್ಧರಿಸಿದೆ.

ರಾಜ್ಯದಲ್ಲಿ ಪಿಎಂ‌ ಕಿಸಾನ್ ಸಮ್ಮಾನ್ ಯೋಜನೆ ಪ್ರಗತಿ:

ರಾಜ್ಯದಲ್ಲಿ ಕೇಂದ್ರ ಕೊಡಮಾಡುವ ಒಟ್ಟು 6,000 ರೂ. ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿ ಈವರೆಗೆ ಆರನೇ ಕಂತಿನ ಹಣವನ್ನು ರೈತರ ಖಾತೆಗೆ ವರ್ಗಾಯಿಸಲಾಗಿದೆ. ಇಂದು ಪ್ರಧಾನಿ ಮೋದಿ ಏಳನೇ ಕಂತಿನ ಹಣವನ್ನು ಬಿಡುಗಡೆ ಮಾಡಲಿದ್ದು, ನೇರವಾಗಿ ರೈತರ ಖಾತೆಗೆ ಜಮೆಯಾಗಲಿದೆ.

ಕೃಷಿ ಇಲಾಖೆ ನೀಡಿರುವ ಅಂಕಿ-ಅಂಶದಂತೆ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರ ಸರ್ಕಾರದಿಂದ 53,70,920 ರೈತರ ಖಾತೆಗಳಿಗೆ 2018-19 ರಿಂದ 2020-21 ರವರೆಗೆ 5737.32 ಕೋಟಿ ರೂ. ಸಹಾಯಧನ ವರ್ಗಾವಣೆಯಾಗಿದೆ. ಅದೇ 2020-21ನೇ ಸಾಲಿನಲ್ಲಿ ಕೇಂದ್ರ ಸರ್ಕಾರದಿಂದ 53,01,252 ರೈತರ ಖಾತೆಗಳಿಗೆ 2082.09 ಕೋಟಿ ರೂ.ಸಹಾಯಧನ ವರ್ಗಾವಣೆಯಾಗಿರುತ್ತದೆ.

ಇದನ್ನೂ ಓದಿ : ಅಟಲ್ ​​ಜೀ ಜನ್ಮದಿನದಂದು ಸುಶಾಸನ ದಿನ: ದೇಶದ 9 ಕೋಟಿ ರೈತರ ಖಾತೆಗಳಿಗೆ 18,000 ಕೋಟಿ ರೂ. ಜಮೆ

ವಾರ್ಷಿಕವಾಗಿ ಡಿಸೆಂಬರ್ 1 ರಿಂದ ಮಾರ್ಚ್ 31 ರವರೆಗೆ ಮೂರನೇ ಕಂತಿನ ಮೊತ್ತ 2,000ವನ್ನು ರೈತರ ಖಾತೆಗೆ ಜಮೆ ಮಾಡಲಾಗುತ್ತದೆ. ಅದರಂತೆ ಇಂದು ಮೂರನೇ ಕಂತಿನ 2,000 ಮೊತ್ತ ಜಮೆಯಾಗಲಿದೆ. (ಯೋಜನೆ ಶುರುವಾದಾಗಿನಿಂದ ಬಿಡುಗಡೆಯಾಗಿರುವ ಒಟ್ಟು ಏಳನೇ ಕಂತು ಇದಾಗಿದೆ.)

2018ರ ಡಿಸೆಂಬರ್‌ 1ರಿಂದ ಅನ್ವಯವಾಗುವಂತೆ ಕೇಂದ್ರ ಸರ್ಕಾರ ಈ ಯೋಜನೆ ಜಾರಿಗೆ ತಂದಿದ್ದು, ತನ್ನ ಮೊದಲ ಕಂತಿನಲ್ಲಿ ರಾಜ್ಯದ 53,70,920 ರೈತರ ಖಾತೆಗೆ 1,074.18 ಕೋಟಿ ರೂ. ಹಣ ಜಮೆಯಾಗಿದೆ. ಇನ್ನು ಎರಡನೇ ಕಂತಿನಲ್ಲಿ 53,05,332 ರೈತರ ಖಾತೆಗೆ 1,061.06 ಕೋಟಿ ರೂ. ಜಮೆಯಾಗಿದೆ. ಪಿಎಂ ಕಿಸಾನ್ ಸಮ್ಮಾನ್ ಯೋಜನೆಯ ಮೂರನೇ ಕಂತಿನಲ್ಲಿ ರಾಜ್ಯದ 51,83,295 ರೈತರ ಖಾತೆಗಳಿಗೆ 1036.65 ಕೋಟಿ ರೂ. ಹಣ ಜಮೆಯಾಗಿದೆ. ಅದೇ ರೀತಿ ನಾಲ್ಕನೇ ಕಂತಿನಲ್ಲಿ 49,68,998 ರೈತರ ಖಾತೆಗಳಿಗೆ 993.79 ಕೋಟಿ ರೂ. ಹಣ ಜಮೆಯಾಗಿದೆ. ಇನ್ನು ಐದನೇ ಕಂತಿನ ಪಿಎಂ ಕಿಸಾನ್ ಸಮ್ಮಾನ್ ಯೋಜನೆ ಹಣ ರಾಜ್ಯದ ಒಟ್ಟು 47,36,111 ರೈತರ ಖಾತೆಗಳಿಗೆ 947.22 ಕೋಟಿ ರೂ.‌ ಹಣ ಪಾವತಿಯಾಗಿದೆ. ಇನ್ನು ಆರನೇ ಕಂತಿನಲ್ಲಿ 31,21,945 ರೈತರ ಖಾತೆಗೆ 624.38 ಕೋಟಿ ರೂ. ಹಣ ಜಮೆಯಾಗಿದೆ.

ರಾಜ್ಯದ ಪಾಲಿನ ಕಿಸಾನ್ ಸಮ್ಮಾನ್ ಪಾವತಿ ಎಷ್ಟು?:

ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರವೂ ಕಳೆದ ಜುಲೈನಲ್ಲಿ ಈ ಯೋಜನೆ ಅಡಿ ರೈತರಿಗೆ ವಾರ್ಷಿಕ 4,000 ರೂ. ಹೆಚ್ಚುವರಿ ಹಣ ನೀಡಲು ನಿರ್ಧರಿಸಿತ್ತು. ಅದರಂತೆ ಪಿಎಂ ಕಿಸಾನ್ ಕರ್ನಾಟಕ ಯೋಜನೆಯಡಿ ರಾಜ್ಯ ಸರ್ಕಾರದಿಂದ ಇಲ್ಲಿಯವರೆಗೆ ಒಟ್ಟು 51,09,730 ರೈತರಿಗೆ ಆರ್ಥಿಕ ನೆರವು ವರ್ಗಾವಣೆಗೆ ಮಂಜೂರಾತಿ ನೀಡಲಾಗಿದ್ದು, 2019-20 ಮತ್ತು 2020-21ನೇ ಸಾಲಿನಲ್ಲಿ ಒಟ್ಟು 1880.71 ಕೋಟಿ ರೂ. ಹಣ ವರ್ಗಾವಣೆಯಾಗಿದೆ‌ ಎಂದು ಕೃಷಿ ಇಲಾಖೆ ಮಾಹಿತಿ ನೀಡಿದೆ.

2019-20 ಸಾಲಿನಲ್ಲಿ ಒಟ್ಟು 44,67,498 ರೈತರಿಗೆ 893.95 ಕೋಟಿ ರೂ. ಸಹಾಯಧನ ವರ್ಗಾವಣೆಯಾಗಿದೆ. 2020-21 ನೇ ಸಾಲಿನಲ್ಲಿ ಪಿಎಂ ಕಿಸಾನ್ ಕರ್ನಾಟಕ ಯೋಜನೆಯಡಿ ಇಲ್ಲಿವರೆಗೆ ಒಟ್ಟು 51,09,730 ರೈತರಿಗೆ ಸಹಾಯಧನ ನೀಡಲು ಮಂಜೂರಾತಿ ನೀಡಿದ್ದು, DBT ಪ್ರಕ್ರಿಯೆಯಲ್ಲಿ 49,33,840 ರೈತರ ಖಾತೆಗೆ 986.76 ಕೋಟಿ ರೂ. ಜಮೆಯಾಗಿದೆ ಎಂದು ಕೃಷಿ ಇಲಾಖೆ ನೀಡಿರುವ ಅಂಕಿಅಂಶದಲ್ಲಿ ತಿಳಿಸಲಾಗಿದೆ.

ABOUT THE AUTHOR

...view details