ಬೆಂಗಳೂರು: ಪೊಲೀಸ್ ಸಿಬ್ಬಂದಿ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಆರೋಪಿಸಿರುವ ವ್ಯಕ್ತಿಯೊಬ್ಬರು, ತನಗೆ ದಯಾಮರಣ ನೀಡಿ ಎಂದು ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ವೃತ್ತಿಯಲ್ಲಿ ಆಟೋ ಚಾಲಕನಾಗಿರುವ ಹರ್ಷ ಎಂಬಾತ ದಯಾಮರಣ ಕೋರಿ ಪತ್ರ ಬರೆದಿದ್ದು, ಟ್ವಿಟರ್ನಲ್ಲಿ ನಗರ ಪೊಲೀಸ್ ಆಯುಕ್ತರಿಗೆ ಟ್ಯಾಗ್ ಮಾಡಿದ್ದಾರೆ.
"ಕಳೆದ ವರ್ಷ ಪತ್ನಿ ವರದಕ್ಷಿಣೆ ಕಿರುಕುಳ ಆರೋಪದಡಿ ತನ್ನ ಹಾಗೂ ತಾಯಿಯ ವಿರುದ್ಧ ಪ್ರಕರಣ ದಾಖಲಿಸಿದ್ದಳು. ಮಹಿಳಾ ಠಾಣೆ ಇನ್ಸ್ಪೆಕ್ಟರ್ ಹಾಗೂ ಸಿಬ್ಬಂದಿ ಸರಿಯಾಗಿ ತನಿಖೆ ಕೈಗೊಂಡಿಲ್ಲ. ಪೊಲೀಸರ ಕೃತ್ಯದಿಂದ ನಾವು 20% ಬಡ್ಡಿಗೆ ಸಾಲ ಪಡೆದು ಜಾಮೀನು ಪಡೆದಿದ್ದೇವೆ. ಪುನಃ 5% ಬಡ್ಡಿಗೆ ಸಾಲ ಪಡೆದು, ನಮಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಕಚೇರಿಗೆ ಅಲೆದಾಡುತ್ತಿದ್ದೇವೆ. ಆರು ತಿಂಗಳಿನಿಂದ ನನ್ನ ಕೆಲಸವೂ ಹಾಳಾಗಿದೆ. ಸಾಲ ಕೊಟ್ಟವರು ವಾಪಸ್ ಕೇಳುತ್ತಿದ್ದಾರೆ.
ಬಸವನಗುಡಿ ಠಾಣೆಯ ಸಿಬ್ಬಂದಿ ಕೀರ್ತಿ, ಆಶಾರಾಣಿ, ಎಎಸ್ಐ ಕುಮಾರ್, ಹಾಗೂ ಇನ್ಸ್ಪೆಕ್ಟರ್ ಸೂಕ್ತ ತನಿಖೆ ಮಾಡದೇ ದೋಷಾರೋಪಣ ಪಟ್ಟಿ ಸಲ್ಲಿಕೆ ಮಾಡಿದ್ದಾರೆ. ನನ್ನ ಮೇಲೆ ಮಾಡಿರುವ ಆರೋಪ ಸುಳ್ಳು ಎಂಬುದಕ್ಕೆ ನನ್ನ ಬಳಿ ಸಾಕ್ಷಿಯಿದೆ. ಆದ್ದರಿಂದ ಪ್ರಕರಣದ ಮರು ತನಿಖೆಗೆ ಆದೇಶಿಸಿ, ಬಸವನಗುಡಿ ಮಹಿಳಾ ಠಾಣೆಯ ಅಂದಿನ ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಿ, ಮತ್ತು ನನ್ನ ಸಾಲವನ್ನು ಅವರುಗಳಿಂದಲೇ ಕಟ್ಟಿಸಿ ಕೊಡಿ. ಇಲ್ಲವಾದಲ್ಲಿ ದಯಾಮರಣ ನೀಡಿ" ಎಂದು ಪತ್ರದಲ್ಲಿ ಬರೆದಿದ್ದಾರೆ.
ಕುಡಿದ ನಶೆಯಲ್ಲಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನ: ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಬೇಸತ್ತ ವ್ಯಕ್ತಿ ಕುಡಿದ ನಶೆಯಲ್ಲಿ ಚಾಕುವಿನಿಂದ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ದೊಡ್ಡಬಳ್ಳಾಪುರ ತಾಲ್ಲೂಕಿನ ಕಂಚಿಗನಾಳ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಿವಾಸಿ ಆಂಜಿನಪ್ಪ (54) ಆತ್ಮಹತ್ಯೆಗೆ ಯತ್ನಿಸಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಕುಡಿತದ ಚಟ ಹತ್ತಿಸಿಕೊಂಡಿದ್ದ ಆಂಜಿನಪ್ಪ ಸದಾ ಕುಡಿದು ಮನೆಗೆ ಬರುತ್ತಿದ್ದ, ಎಂದು ತಿಳಿದು ಬಂದಿದೆ.