ಬೆಂಗಳೂರು: ಸಾರಿಗೆ ಸಿಬ್ಬಂದಿ ಬೇಡಿಕೆ ಈಡೇರಿಕೆಯು ಸರ್ಕಾರಕ್ಕೆ ಒಂದು ದೊಡ್ಡ ಸವಾಲಾಗಿದ್ದು, ತಕ್ಷಣಕ್ಕೆ ಈ ಬಗ್ಗೆ ನಿರ್ಧಾರ ಮಾಡಲು ಸಾಧ್ಯವಿಲ್ಲ. ಪರಿಶೀಲನೆ ನಡೆಸಿ ನಿರ್ಧಾರ ಕೈಗೊಳ್ಳಬೇಕು. ನಿಮ್ಮ ಬೇಡಿಕೆ ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ, ಪ್ರತಿಭಟನೆ ಕೈಬಿಡಿ ಎಂದು ಮುಷ್ಕರನಿರತ ಸಾರಿಗೆ ಸಿಬ್ಬಂದಿಗೆ ಸಾರಿಗೆ ಸಚಿವರೂ ಆಗಿರುವ ಲಕ್ಷ್ಮಣ ಸವದಿ ಮನವಿ ಮಾಡಿದ್ದಾರೆ.
ಮಾಧ್ಯಮವರೊಂದಿಗೆ ಮಾತನಾಡಿದ ಅವರು, ಇಂದು ಅಧಿಕಾರಿಗಳ ಸಭೆ ನಡೆಸುತ್ತೇನೆ. ಬಳಿಕ ನೌಕರರ ಜೊತೆಯಲ್ಲಿಯೂ ಸಭೆ ನಡೆಸಿ ಮಾತಾಡುತ್ತೇನೆ. ಸಭೆಯಲ್ಲಿ ಬೇಡಿಕೆ ಈಡೇರಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ ಎಂದು ಭರವಸೆ ನೀಡಿದರು.
ಈ ಸುದ್ದಿಯನ್ನೂ ಓದಿ:ಮೆಜೆಸ್ಟಿಕ್ ನಿಲ್ದಾಣಕ್ಕೆ ಬಾರದ ಬಸ್ಗಳು: ಪ್ರಯಾಣಿಕರ ಪರದಾಟ
ಸದ್ಯ ಕೋವಿಡ್ನಿಂದ ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿಲ್ಲ. ಆರ್ಥಿಕ ಸಂಕಷ್ಟ ಎದುರಾಗಿರುವ ಇಂತಹ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಬೇಕು. ಜನರಿಗೆ ತೊಂದರೆ ಕೊಡೋದು ಬೇಡ, ಪ್ರತಿಭಟನೆ ಕೈ ಬಿಟ್ಟು, ಬೇಡಿಕೆ ಬಗ್ಗೆ ಕುಳಿತು ಚರ್ಚೆ ಮಾಡೋಣ ಎಂದು ತಿಳಿಸಿದರು. ಒಂದು ನಿಗಮದ ಬೇಡಿಕೆ ಈಡೇರಿಸಿದರೆ ಎಲ್ಲಾ 4 ನಿಗಮದಿಂದ ಇದೇ ಒತ್ತಾಯ ಕೇಳಿಬರುತ್ತದೆ. ಹಾಗಾಗಿ ಇದು ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ ಎಂದರು.