ಕರ್ನಾಟಕ

karnataka

ETV Bharat / state

ರಾಜ್ಯದಲ್ಲಿನ ಪ್ರಾಥಮಿಕ ಆರೋಗ್ಯ ಕೇಂದ್ರಗಳು 24×7 ಕಾರ್ಯನಿರ್ವಹಿಸಲು ಯೋಜನೆ: ಸಚಿವ ಸುಧಾಕರ್ - belagavi

ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಸಚಿವ ಡಾ. ಕೆ.ಸುಧಾಕರ್ ಉದ್ಘಾಟಿಸಿದರು.

belagavi
ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

By

Published : Nov 21, 2020, 5:06 PM IST

ಬೆಳಗಾವಿ: ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು 24x7 ಕಾರ್ಯನಿರ್ವಹಿಸುವಂತೆ ಯೋಜನೆ ರೂಪಿಸಲಾಗುತ್ತಿದೆ ಎಂದು ಆರೋಗ್ಯ ಮತ್ತು ‌ವೈದ್ಯಕೀಯ ಶಿಕ್ಷಣ ಇಲಾಖೆಯ ಸಚಿವ ಡಾ. ಕೆ.ಸುಧಾಕರ್ ಹೇಳಿದರು.

ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ

ನಗರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್)ಯ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ ಮಾತನಾಡಿದ ಅವರು, ಜನವರಿಯಿಂದ ಎಲ್ಲಾ ರೀತಿಯ ಪರೀಕ್ಷೆ ಸಂಪೂರ್ಣ ಉಚಿತವಾಗಿ ನೀಡಲು ಸರ್ಕಾರ ನಿರ್ಧರಿಸಿದೆ. ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಗಳು ಎಲ್ಲವೂ ಉಚಿತವಾಗಿ ಮಾಡಲಾಗುವುದು. ಚೀಟಿ ರಹಿತ ವ್ಯವಸ್ಥೆಯನ್ನು ಜಾರಿಗೆ ತರಲು ಎಲ್ಲಾ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಯಾವುದೇ ಔಷಧಿ ಅಗತ್ಯವಿದ್ದರೂ ಸರ್ಕಾರ ಪೂರೈಸುತ್ತದೆ ಎಂದು ತಿಳಿಸಿದರು.

ಮಾದರಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆ:

ಜನಸಂಖ್ಯೆ ಅಧರಿಸಿ ಹೆಚ್ಚುವರಿ ಪಿಹೆಚ್​ಸಿ ಆರಂಭ, ಆ್ಯಂಬುಲೆನ್ಸ್ ಸೇವೆ ಬಲವರ್ಧನೆ ಮಾಡಲು ತೀರ್ಮಾನಿಸಲಾಗಿದೆ. ಶುಚಿತ್ವ ಇರುವುದಿಲ್ಲ ಎಂಬ ದೊಡ್ಡ ಆರೋಪ ಸರ್ಕಾರಿ ಆಸ್ಪತ್ರೆಗಳ ಮೇಲಿದೆ. ವಿಷಯ ಪರಿಣಿತಿ ಜೊತೆಗೆ ಆಡಳಿತಾತ್ಮಕ ಕೌಶಲ್ಯವನ್ನು ವೈದ್ಯರು ರೂಢಿಸಿಕೊಳ್ಳಬೇಕು ಎಂದರು.

ಆತ್ಮಾವಲೋಕನ ಅಗತ್ಯ:

ಖಾಸಗಿ ಆಸ್ಪತ್ರೆಗಳಿಗಿಂತ ಸರ್ಕಾರ ಹೆಚ್ಚು ಹಣ ಖರ್ಚು ಮಾಡುತ್ತದೆ. ಆದಾಗ್ಯೂ ಜನರಿಗೆ ಯಾಕೆ ಉತ್ತಮ ಸೌಕರ್ಯಗಳು ಸಿಗುತ್ತಿಲ್ಲ ಎಂಬುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ. ಆತ್ಮಸಾಕ್ಷಿಗೆ ಅನುಗುಣವಾಗಿ ಕಾರ್ಯನಿರ್ವಹಿಸಿದರೆ ಖಾಸಗಿ ಆಸ್ಪತ್ರೆಗಿಂತ ಉತ್ತಮ ಸೇವೆ ನೀಡುವುದು‌ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ಎಲ್ಲಾ ಹಂತದ ವೈದ್ಯಕೀಯ ಅಧಿಕಾರಿ/ಸಿಬ್ಬಂದಿಯ ಕೌಶಲ್ಯ ಅಭಿವೃದ್ಧಿಗೆ ಮುಂಬರುವ ದಿನಗಳಲ್ಲಿ ತರಬೇತಿ ನೀಡಲಾಗುವುದು ಎಂದರು.

ಆರೋಗ್ಯ-ವೈದ್ಯಕೀಯ ಶಿಕ್ಷಣ ಇಲಾಖೆಗಳ ವಿಲೀನ:

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಗಳನ್ನು ಮುಂಬರುವ ದಿನಗಳಲ್ಲಿ ವಿಲೀನಗೊಳಿಸಿ ಒಂದೇ ಇಲಾಖೆ ರೂಪಿಸುವ ಚಿಂತನೆ ಸರ್ಕಾರಕ್ಕಿದೆ. ಸಾಮಾನ್ಯ ಜನರಿಗೆ ಗುಣಮಟ್ಟದ ಚಿಕಿತ್ಸೆ ಮತ್ತು ಸೌಲಭ್ಯ ಒದಗಿಸಲು ವೈದ್ಯಕೀಯ ಬೋಧಕ-ಬೋಧಕೇತರ ಸಿಬ್ಬಂದಿಗೆ 7ನೇ ವೇತನ ಆಯೋಗದ ಪ್ರಕಾರ ಸಂಬಳ, ಪಿಂಚಣಿ ವ್ಯವಸ್ಥೆ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಹೆಚ್ಚಳ ಮತ್ತಿತರ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಸಕ ಅನಿಲ್ ಬೆನಕೆ, ಉತ್ತರ ಕರ್ನಾಟಕದಲ್ಲಿ ಸರ್ಕಾರಿ ಕ್ಯಾನ್ಸರ್ ಆಸ್ಪತ್ರೆ ಇಲ್ಲದಿರುವುದರಿಂದ ಬೆಳಗಾವಿಯಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಿಸಬೇಕು. 500 ಹಾಸಿಗೆಯ ನೂತನ ಆಸ್ಪತ್ರೆಯ ನಿರ್ಮಾಣದ ಅಗತ್ಯವಿದ್ದು, ಹಳೇ‌ ಕಟ್ಟಡಗಳನ್ನು ತೆರವುಗೊಳಿಸಿ ಹೊಸ ಆಸ್ಪತ್ರೆ ನಿರ್ಮಿಸಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details