ಬೆಂಗಳೂರು:ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾ ಭಾರತ ಪ್ರವಾಸ ಕೈಗೊಂಡ ಸಂದರ್ಭದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತು ಎಂಬ ಸ್ಪೋಟಕ ವಿಷಯವೊಂದು ಸಿಸಿಬಿ ತನಿಖೆಯಿಂದ ಬಹಿರಂಗವಾಗಿದೆ.
ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಾಂಬ್ ಸ್ಪೋಟ ಪ್ರಕರಣವೊಂದರಲ್ಲಿ ಮುಂಬೈ ಜೈಲಿನಲ್ಲಿದ್ದ ಶಂಕಿತ ಉಗ್ರ ಝೈನಾಲುವುದ್ದೀನ್‌ನ ಸಿಸಿಬಿ ಪೊಲೀಸರು ನಗರಕ್ಕೆ ಕರೆ ತಂದಿದ್ದರು. ವಿಚಾರಣೆ ನಡೆಸಿದಾಗ ಪೊಲೀಸರಿಗೆ ಸ್ಪೋಟಕ ವಿಷಯವನ್ನು ಬಾಯ್ಬಿಟ್ಟಿದ್ದಾನೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದಕ ಕೃತ್ಯ ಎಸಗಲು ಸಂಚು ರೂಪಿಸಲು ವೇದಿಕೆ ಸಿದ್ಧಪಡಿಸಿಕೊಂಡಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.
ಸಿಸಿಬಿ ಪೊಲೀಸರ ತನಿಖೆ ವೇಳೆ ಸ್ಪೋಟಕ ಮಾಹಿತಿ ಹೊರ ಹಾಕಿದ ಶಂಕಿತ ಉಗ್ರ ಝೈನಾಲುವುದ್ದೀನ್.. 2015ರ ಜನವರಿ 26ರಂದು ಭಾರತಕ್ಕೆ ಅಮೇರಿಕಾ ಅಧ್ಯಕ್ಷ ಬರಾಕ್ ಒಬಾಮಾ ಅವರು ಭೇಟಿ ನೀಡಿದ್ದರು. ಇದೇ ದಿನ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುವ ಮೂಲಕ ದೇಶದೆಲ್ಲೆಡೆ ಬಾಂಬ್ ಸ್ಪೋಟಿಸುವ ಯೋಜನೆ ಸಿದ್ದವಾಗಿತ್ತು. ಆದರೆ, ಜನವರಿ 08 ರಂದು ಇಂಡಿಯನ್ ಮುಜಾ ಹಿದ್ದೀನ್ ಸಂಘಟನೆಯ ಉಗ್ರನನ್ನು ಎನ್‌ಐಎ ಬಂಧಿಸಿ ಗಣರಾಜ್ಯೋತ್ಸವದ ದಿನದ ಬಾಂಬ್ ಸ್ಪೋಟ ಯೋಜನೆಯನ್ನು ನಿಷ್ಕ್ರಿಯಗೊಳಿಸಿತ್ತು ಎಂದು ಬಾಯಿಬಿಟ್ಟಿದ್ದಾನೆ.
ಇಂಡಿಯನ್ ಮುಜಾಹಿದ್ದೀನ್(ಐಎಂ) ಸಂಘಟನೆಯ ಸಕ್ರಿಯ ಕಾರ್ಯಕರ್ತನಾಗಿದ್ದ ಶಂಕಿತ ಉಗ್ರ ಝೈನಾಲುವುದ್ದೀನ್ 2014ರಲ್ಲಿ ನಡೆದ ಚರ್ಚ್ ಸ್ಟ್ರೀಟ್ ಬಾಂಬ್ ಬ್ಲಾಸ್ಟ್ಗೆ ಭಟ್ಕಳದಿಂದ ಸ್ಪೋಟಕಗಳನ್ನ ಸರಬರಾಜು ಮಾಡಿದ್ದ. ಪುಲಕೇಶಿ ನಗರದ ಸೈಯದ್ ಇಸ್ಮಾಯಿಲ್ ಅಫಾಕ್ ಎಂಬುವನ ಮೂಲಕ ಸ್ಪೋಟಕಗಳನ್ನು ಸೈಯದ್ ಅಫಾಕ್ನಿಂದ ಯಾಸಿನ್ ಭಟ್ಕಳ ಕೈ ಸೇರುತ್ತಿದ್ದವು.
ಸೈಯದ್ ಇಸ್ಮಾಯಿಲ್ ಅಫಾಕ್ ವೈದ್ಯನಾಗಿದ್ದು, ಈತ ಪಾಕಿಸ್ತಾನದ ಯುವತಿ ಅಲ್ಲಾಸಾರಾ ಅಬೀರ್ ಎಂಬಾಕೆಯೊಂದಿಗೆ ವಿವಾಹವಾಗಿದ್ದನು. ಹೆಂಡತಿಯನ್ನು ಭೇಟಿ ಮಾಡುವ ನೆಪದಲ್ಲಿ ಪಾಕಿಸ್ತಾನಕ್ಕೆ ತೆರಳುತ್ತಿದ್ದ ಅಫಾಕ್, ರಿಯಾಜ್ ಭಟ್ಕಳ್ ಸಹೋದರರನ್ನು ಭೇಟಿ ಮಾಡುತ್ತಿದ್ದನಂತೆ. ಆತನ ಸೂಚನೆ ಮೇರೆಗೆ ಬೆಂಗಳೂರಿನಲ್ಲಿ ಸ್ಪೋಟಕ ಸರಬರಾಜು ಮಾಡುತ್ತಿದ್ದನು ಎನ್ನಲಾಗುತ್ತಿದೆ.
ಇನ್ನೂ 2010 ರಿಂದ 2013 ವರೆಗೂ ಸ್ಪೋಟಕ ಸಾಮಾಗ್ರಿಗಳನ್ನು ಸರಬರಾಜು ಮಾಡಿದ್ದ ಝೈನಾಲುವುದ್ದೀನ್, ಈತನಿಂದ ಇಸ್ಮಾಯಿಲ್ ಅಫಾಕ್ ಸುಧಾರಿತ ಸ್ಪೋಟಕ ಪಡೆಯುತ್ತಿದ್ದನು. ಭಯೋತ್ಪಾದಕ ಕೃತ್ಯಗಳಿಗೆ ಬೇಕಾದ ಸ್ಪೋಟಕಗಳು ಪುಲಕೇಶಿ ನಗರದ ಠಾಣಾ ವ್ಯಾಪ್ತಿಯ ಕಾಕ್ಸ್ ಟೌನ್ನ ವೈನಾಡ್ ರೆಸ್ಸಿಡೆನ್ಸಿ ಅಪಾರ್ಟ್ಮೆಂಟ್ನ ಪ್ಲ್ಯಾಟ್ನಲ್ಲಿ ತಯಾರಿ ಮಾಡಿಕೊಳ್ಳುತ್ತಿದ್ದನು. ಈ ಮಧ್ಯೆ ಮುಂಬೈ ಟ್ರಿಪಲ್ ಬ್ಲಾಸ್ಟ್, ಪುಣೆಯ ಜರ್ಮನ್ ಬೇಕರಿ, ಗುಜರಾಜ್, ಬಿಹಾರದ ಬೌದ್ಧ ಗಯಾ ಸ್ಪೋಟ ಹಾಗೂ ಹೈದರಾಬಾದ್ ಕಚ್ಚಾ ವಸ್ತು ಸರಬರಾಜು ಮಾಡಿದ್ದು ಇದೇ ಝೈನಾಲುವುದ್ದೀನ್ ಎಂಬುದು ತನಿಖೆಯಿಂದ ತಿಳಿದು ಬಂದಿದೆ.