ಬೆಂಗಳೂರು:ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಸಂರಕ್ಷಿಸುವ ಉದ್ದೇಶದಿಂದ, ಇಂದು ಪಾಲಿಕೆ ಕೇಂದ್ರ ಕಚೇರಿಯಲ್ಲಿ ಕರ್ನಾಟಕ ಜೀವವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು.
ಪಾಲಿಕೆ ವ್ಯಾಪ್ತಿಯಲ್ಲಿ ಜೀವವೈವಿಧ್ಯ ಮಂಡಳಿಯ ಜನತಾ ಜೀವವೈವಿಧ್ಯ ದಾಖಲಾತಿ (peoples biodiversity register-PBR) ತಯಾರಿಕೆ ಕುರಿತು ದಾಖಲಾತಿ ತಯಾರಿಸಲು ಯರ‍್ಯಾರ ಅವಶ್ಯಕತೆ ಇದೆ, ಯಾವ ರೀತಿ ಮಾಡಬೇಕು, ಎಲ್ಲೆಲ್ಲಿ ಅಭಿವೃದ್ಧಿ ಪಡಿಸಬಹುದು, ಎನ್.ಜಿ.ಓಗಳ ಸಹಾಯ ಪಡೆಯುವುದು ಸೇರಿದಂತೆ ಇನ್ನಿತರೆ ವಿಷಯಗಳ ಬಗ್ಗೆ ಕೂಲಂಕಶವಾಗಿ ಚರ್ಚಿಸಲಾಯಿತು.
ಅನಂತ ಹೆಗಡೆ ಅಶೀಸರ ನೇತೃತ್ವದಲ್ಲಿ ಸಭೆ ನಗರದಲ್ಲಿ ಹಸಿರೀಕರಣಗೊಳಿಸಲು ಹೆಚ್ಚು ಪ್ರಾಮುಖ್ಯತೆ ನೀಡಬೇಕು. ಅಲ್ಲದೇ ಪಾಲಿಕೆ ವ್ಯಾಪ್ತಿಯಲ್ಲಿರುವ ನರ್ಸರಿಗಳಲ್ಲಿ ವಿವಿಧ ಜಾತಿಯ ಸಸಿಗಳನ್ನು ಬೆಳೆಸಿ ಅವುಗಳನ್ನು ನೆಡಲು ಮುಂದಾಗಬೇಕು ಎಂದು ಅನಂತ ಹೆಗಡೆ ಅಶೀಸರ ಸೂಚಿಸಿದ್ದಾರೆ.
ಪಾಲಿಕೆ ವ್ಯಾಪ್ತಿಯಲ್ಲಿರುವ ಕೆರೆಗಳು, ಉದ್ಯಾನಗಳು, ಸರ್ಕಾರಿ ಕಚೇರಿಗಳ ಮುಂಭಾಗ, ಮೈದಾನ ಹಾಗೂ ಖಾಲಿ ಜಾಗಗಳನ್ನು ಗುರುತಿಸಿ ಹಸಿರೀಕರಣಗೊಳಿಸಲು ಮುಂದಾಗಬೇಕು. ಉದ್ಯಾನಗಳಲ್ಲಿ ಹೆಚ್ಚು ಸಸಿಗಳನ್ನು ನೆಡಬೇಕು ಎಂದರು.
ಇದಕ್ಕೆ ಸಂಬಂಧ ಪಟ್ಟಂತೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರತಿಕ್ರಿಯಿಸಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಈಗಾಗಲೇ ಎನ್.ಜಿ.ಓಗಳ ಸಹಯೋಗದಲ್ಲಿ ಸಸಿಗಳನ್ನು ನೆಡಲು ಯೋಜನೆ ರೂಪಿಸಲಾಗಿದೆ. ಕಳೆದ ವರ್ಷ 1 ಲಕ್ಷ ಸಸಿಗಳನ್ನು ನೆಟ್ಟಿದ್ದು, ಪ್ರಸಕ್ತ ಸಾಲಿನಲ್ಲಿ 65 ಸಾವಿರ ಸಸಿಗಳನ್ನು ನೆಡಲು ಕ್ರಮವಹಿಸಲಾಗಿದೆ. ಅಲ್ಲದೆ ಕೋಟಿ ವೃಕ್ಷ ಸೈನ್ಯ ದಡಿ ಮೂರು ವರ್ಷದಲ್ಲಿ 1 ಕೋಟಿ ಸಸಿ ನೆಡುವ ಯೋಜನೆಯಿದ್ದು, ಉದ್ಯಾನ, ರಸ್ತೆ ಬದಿ, ಸರ್ಕಾರಿ/ಪಾಲಿಕೆ ಖಾಲಿ ಜಾಗ, ಮೈದಾನ, ರೈಲ್ವೆ ಹಳಿಗಳ ಪಕ್ಕ ಸೇರಿದಂತೆ ಸ್ಥಳಾವಕಾಶವಿರುವ ಕಡೆ ಸಸಿ ನೆಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದರು.