ಬೆಂಗಳೂರು: ಕಳೆದ ಬಾರಿ ರಾಜ್ಯದಲ್ಲಿ ಪಾದಯಾತ್ರೆ ಮೂಲಕವೇ ಅಧಿಕಾರದ ಗದ್ದುಗೆ ಏರಿದ್ದ ಕಾಂಗ್ರೆಸ್ ಇದೀಗ ಮತ್ತೊಮ್ಮೆ ಪಾದಯಾತ್ರೆಯ ಮೊರೆ ಹೋಗಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ 10 ದಿನಗಳ ಪಾದಯಾತ್ರೆಗೆ ಕೈ ಪಡೆ ಮುಂದಾಗಿದ್ದು, ಈ ಪಾದಯಾತ್ರೆಗೆ ಪ್ರತಿ ಹೆಜ್ಜೆಗೂ ಕೌಂಟರ್ ನೀಡಲು ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.
ಜನವರಿ 9 ರಿಂದ ಕಾಂಗ್ರೆಸ್ ಬೃಹತ್ ಪಾದಯಾತ್ರೆ ಆರಂಭಿಸುತ್ತಿದೆ. ಮೇಕೆದಾಟು ಯೋಜನೆಗೆ ಆಗ್ರಹಿಸಿ ಹೊಗೇನಕಲ್ನಿಂದ ಬೆಂಗಳೂರುವರೆಗೆ 10 ದಿನಗಳ ಪಾದಯಾತ್ರೆ ನಡೆಸಿ ಸರ್ಕಾರದ ಗಮನ ಸೆಳೆಯಲು ಮುಂದಾಗಿದೆ. ಪಾದಯಾತ್ರೆಯುದ್ದಕ್ಕೂ ರಾಜ್ಯ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆಯಲ್ಲಿ ವಿಳಂಬ ನೀತಿ ಅನುಸರಿಸುತ್ತಿದೆ ಎನ್ನುವ ಸಂದೇಶವನ್ನು ರಾಜ್ಯದ ಜನತೆಗೆ ತಲುಪಿಸಲು ಕಾಂಗ್ರೆಸ್ ತಂತ್ರ ರೂಪಿಸಿದೆ.
ಇದನ್ನೂ ಓದಿ: ಮಂಡ್ಯದಲ್ಲಿ ಕೊರೊನಾ ಸ್ಫೋಟ: ತಮಿಳುನಾಡಿಗೆ ಹೋಗಿದ್ದ 30ಕ್ಕೂ ಹೆಚ್ಚು ಜನರಿಗೆ ಕೋವಿಡ್ ದೃಢ!
ಕಳೆದ ಬಾರಿ ಅಕ್ರಮ ಗಣಿಗಾರಿಕೆ ಪ್ರಕರಣ ಮುಂದಿಟ್ಟುಕೊಂಡು ಬೆಂಗಳೂರಿನಿಂದ ಬಳ್ಳಾರಿವರೆಗೆ ಪಾದಯಾತ್ರೆ ನಡೆಸಿದ್ದ ಕೈ ನಾಯಕರಿಗೆ ನಂತರದ ಚುನಾವಣೆಯಲ್ಲಿ ಜನಮನ್ನಣೆ ಸಿಕ್ಕಿತ್ತು. ಸಿದ್ದರಾಮಯ್ಯ ಮುಖ್ಯಮಂತ್ರಿಯೂ ಆದರು. ಆ ಪಾದಯಾತ್ರೆ ವೇಳೆಯೂ ರಾಜ್ಯದಲ್ಲಿ ಬಿಜೆಪಿ ಸರ್ಕಾರವೇ ಇತ್ತು. ಈಗಲೂ ಅಂತಹದ್ದೇ ಸನ್ನಿವೇಶ ನಿರ್ಮಾಣವಾಗುತ್ತಿದೆ. ಆದರೆ ಕಳೆದ ಬಾರಿಯ ತಪ್ಪಿನಿಂದ ಎಚ್ಚೆತ್ತುಕೊಂಡಿರುವ ಬಿಜೆಪಿ ಈಗ ಕಾಂಗ್ರೆಸ್ ಪಾದಯಾತ್ರೆ ಸಫಲವಾಗದಂತೆ ನೋಡಿಕೊಳ್ಳಲು ಯತ್ನಿಸುತ್ತಿದೆ.
ಪ್ಲಾನ್ ಎ :ರಾಜ್ಯದಲ್ಲಿ ಈಗಾಗಲೇ ಕೊರೊನಾ ಸೋಂಕು ಹೆಚ್ಚಾಗುತ್ತಿದ್ದು, ನೈಟ್ ಕರ್ಫ್ಯೂ ಜಾರಿಗೊಳಿಸಲಾಗಿದೆ. ಪಾಸಿಟಿವಿಟಿ ದರ ಹೆಚ್ಚುತ್ತಿದ್ದು, ಇದನ್ನೇ ಮುಂದಿಟ್ಟುಕೊಂಡು ಕಠಿಣ ನಿರ್ಬಂಧಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿ ಪಾದಯಾತ್ರೆಗೆ ಬ್ರೇಕ್ ಹಾಕಬೇಕು ಎಂದು ಬಿಜೆಪಿ ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ಏಕಾಏಕಿ ನಿರ್ಧಾರ ಕೈಗೊಳ್ಳದೆ ಸರಣಿ ಸಭೆಗಳನ್ನು ನಡೆಸಿ ನಂತರವೇ ನಿರ್ಧಾರ ಪ್ರಕಟಿಸಲು ಮುಂದಾಗಿದೆ.