ಕರ್ನಾಟಕ

karnataka

ETV Bharat / state

ಕಟ್ಟುನಿಟ್ಟಿನ ಎಸ್ಮಾ ಜಾರಿಗೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ

ಸಾರಿಗೆ ನೌಕರರ ಮುಷ್ಕರ ಹತ್ತಿಕ್ಕಲು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆ (ESMA)ಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ಸರ್ಕಾರಕ್ಕೆ ನಿರ್ದೇಶಿಸುವಂತೆ ಹೈಕೋರ್ಟ್​ಗೆ ಪಿಐಎಲ್​ ಸಲ್ಲಿಕೆಯಾಗಿದೆ.

Essential Services Maintenance Act
ಹೈಕೋರ್ಟ್‌ಗೆ ಅರ್ಜಿ

By

Published : Apr 19, 2021, 10:30 PM IST

ಬೆಂಗಳೂರು: ಸಾರಿಗೆ ನೌಕರರ ಮುಷ್ಕರ ತಡೆಹಿಡಿಯಲು ಅಗತ್ಯ ಸೇವೆಗಳ ನಿರ್ವಹಣಾ ಕಾಯ್ದೆಯನ್ನು (ಎಸ್ಮಾ) ಕಟ್ಟುನಿಟ್ಟಾಗಿ ಜಾರಿಗೊಳಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ.

ಈ ಕುರಿತು ನಗರದ ಟಿ.ಶ್ರೀನಿವಾಸ್ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದು. ರಾಜ್ಯ ಸರ್ಕಾರ, ಸಾರಿಗೆ ಇಲಾಖೆ, ಗೃಹ ಇಲಾಖೆ, ಕೆಎಸ್‌ಆರ್‌ಟಿಸಿ, ಬಿಎಂಟಿಸಿ, ಎನ್‌ಡಬ್ಲ್ಯೂಕೆಆರ್‌ಟಿಸಿ, ಎನ್‌ಇಕೆಆರ್‌ಟಿಸಿಯನ್ನು ಅರ್ಜಿಯಲ್ಲಿ ಪ್ರತಿವಾದಿ ಮಾಡಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ಬರಬೇಕಿದೆ.

ಸಾರಿಗೆ ನೌಕರರ ಬಸ್ ಮುಷ್ಕರದಿಂದ ರಾಜ್ಯದ ಜನತೆಗೆ ತೀವ್ರ ತೊಂದರೆ ಉಂಟಾಗುತ್ತಿದೆ. ಸಿಗಬೇಕಾದ ಸಾರಿಗೆ ಸೌಲಭ್ಯ ಲಭ್ಯವಾಗುತ್ತಿಲ್ಲ. ಮೋಟಾರು ವಾಹನ ಮೂಲಕ ವ್ಯಕ್ತಿ ಮತ್ತು ಸರಕುಗಳನ್ನು ಸಾಗಾಟ ಮಾಡುವುದು ಎಸ್ಮಾ ಕಾಯ್ದೆಯಡಿ ಬರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಎಸ್ಮಾ ಕಾಯ್ದೆ ಜಾರಿಗೊಳಿಸುವ ಸಂಪೂರ್ಣ ಅಧಿಕಾರ ಸರ್ಕಾರ ಹೊಂದಿದೆ. ಮುಷ್ಕರ ತಡೆಯಲು ಎಸ್ಮಾ ಕಾಯ್ದೆಯನ್ನು ಸರ್ಕಾರ ಜಾರಿ ಮಾಡುತ್ತಿಲ್ಲ. ಇದರಿಂದ ಸಮಸ್ಯೆ ಮತ್ತಷ್ಟು ಜಟಿಲವಾಗುತ್ತಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

ಮುಷ್ಕರ ತಡೆಯಲು ಸಾರಿಗೆ ನೌಕರರ ವಿರುದ್ಧ ಎಸ್ಮಾ ಕಾಯ್ದೆ ಜಾರಿಗೊಳಿಸಬೇಕು. ಮುಷ್ಕರದ ನಡುವೆಯೇ ಕರ್ತವ್ಯಕ್ಕೆ ಹಾಜರಾಗಿದ್ದ, ಎನ್‌ಡಬ್ಲ್ಯೂಕೆಆರ್‌ಟಿಸಿನ ನೌಕರ ರಬೀದ್ ರಸೂಲ್ ಕೆ.ಅವತಿ ಮೇಲೆ ಕೆಲ ದುಷ್ಕರ್ಮಿಗಳು ಕಲ್ಲು ತೂರಾಡಿ ತೀವ್ರ ಹಲ್ಲೆ ನಡೆಸಿದ ಪರಿಣಾಮ ಆತ ಮೃತಪಟ್ಟಿದ್ದಾನೆ. ಹೀಗಾಗಿ, ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಮುಷ್ಕರದಿಂದ ಉಂಟಾಗಿರುವ ನಷ್ಟವನ್ನು ಮುಷ್ಕರ ನಡೆಸಿದವರಿಂದಲೇ ವಸೂಲಿ ಮಾಡುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಪಿಐಎಲ್ ಮೂಲಕ ಅರ್ಜಿದಾರರು ಕೋರಿದ್ದಾರೆ.

ABOUT THE AUTHOR

...view details