ಕರ್ನಾಟಕ

karnataka

ETV Bharat / state

SSLC ಪರೀಕ್ಷೆ ರದ್ದು ಕೋರಿ ಹೈಕೋರ್ಟ್​ಗೆ ಪಿಐಎಲ್, ಜುಲೈ 12ಕ್ಕೆ ವಿಚಾರಣೆ - SSLC examination

ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಕಳೆದ ಫೆ.5 ರಂದು ನೋಟಿಫಿಕೇಷನ್ ಹೊರಡಿಸಿದ್ದು, ಜುಲೈ 19ರಿಂದ 22ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಈ ಮಧ್ಯೆ ಪಿಯುಸಿ ಪರೀಕ್ಷೆ ರದ್ದುಗೊಳಿಸಿರುವ ರೀತಿಯಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಕೋರಿ ಹೈಕೋರ್ಟ್​ಗೆ ಪಿಐಎಲ್ ಸಲ್ಲಿಸಲಾಗಿದೆ.

ಹೈಕೋರ್ಟ್
ಹೈಕೋರ್ಟ್

By

Published : Jul 9, 2021, 3:02 PM IST

ಬೆಂಗಳೂರು: ಪಿಯುಸಿ ಪರೀಕ್ಷೆ ರದ್ದುಗೊಳಿಸಿರುವ ರೀತಿಯಲ್ಲೇ ಎಸ್​ಎಸ್​ಎಲ್​ಸಿ ಪರೀಕ್ಷೆಯನ್ನೂ ರದ್ದುಪಡಿಸಬೇಕು ಎಂದು ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜುಲೈ 12ಕ್ಕೆ ನಿಗದಿಪಡಿಸಿದೆ.

ಪ್ರಸಕ್ತ ಸಾಲಿನ ಪಿಯು ವಿದ್ಯಾರ್ಥಿಗಳು ಹಾಗೂ ಪುನರಾವರ್ತಿತ ವಿದ್ಯಾರ್ಥಿಗಳನ್ನು ಪರೀಕ್ಷೆ ಇಲ್ಲದೆ ಪಾಸ್​ ಮಾಡಿದಂತೆಯೇ ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳನ್ನೂ ತೇರ್ಗಡೆ​ ಮಾಡಬೇಕು ಎಂದು ಕೋರಿ ನಗರದ ಜ್ಞಾನಮಂದಿರ ಟ್ರಸ್ಟ್​ನ ಎಸ್.ವಿ.ಸಿಂಗ್ರೇಗೌಡ ಅವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.

ಅರ್ಜಿಯಲ್ಲಿ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರು ಹಾಗೂ ಎಸ್​ಎಸ್​ಎಲ್​ಸಿ ಬೋರ್ಡ್ ನಿರ್ದೇಶಕರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿದೆ. ಎಸ್​ಎಸ್​ಎಲ್​ಸಿ ಪರೀಕ್ಷೆ ನಡೆಸಲು ಕಳೆದ ಫೆ.5 ರಂದು ನೋಟಿಫಿಕೇಷನ್ ಹೊರಡಿಸಿದ್ದು, ಜುಲೈ 19ರಿಂದ 22ರವರೆಗೆ ಪರೀಕ್ಷೆ ನಡೆಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಜೂನ್ 28ರಂದು ಪರೀಕ್ಷಾ ವೇಳಾ ಪಟ್ಟಿ ಪ್ರಕಟಿಸಲಾಗಿದೆ. ಆದರೆ, ಕೋವಿಡ್ ಕಾರಣಕ್ಕಾಗಿ ಕಳೆದ ವರ್ಷ ಸರಿಯಾಗಿ ತರಗತಿಗಳೇ ನಡೆದಿಲ್ಲ. ಅದರಲ್ಲೂ ಇಂಟರ್ನೆಟ್, ಸ್ಮಾರ್ಟ್ ಫೋನ್​ ಇಲ್ಲದ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಆನ್​ಲೈನ್ ಮೂಲಕವೂ ಪಾಠ ಕೇಳಲು ಸಾಧ್ಯವಾಗಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿಲಾಗಿದೆ.

ಕೋವಿಡ್ ಒಂದು ಮತ್ತು ಎರಡನೇ ಅಲೆಯಲ್ಲಿ ಸಾಕಷ್ಟು ಜನ ಸಾವನ್ನಪ್ಪಿದ್ದಾರೆ. ಕೋವಿಡ್ 3ನೇ ಅಲೆ ಎದುರಾಗುವ ಸಾಧ್ಯತೆ ಇದ್ದು 1 ರಿಂದ 15ನೇ ವಯಸ್ಸಿನ ಮಕ್ಕಳಿಗೆ ಸೋಂಕು ತಗುಲುವ ಕುರಿತು ತಜ್ಞರು ಹೇಳಿದ್ದಾರೆ. ಪ್ರಸಕ್ತ ವರ್ಷ ರಿಪೀಟರ್ಸ್ ಸೇರಿದಂತೆ ಸುಮಾರು 9 ಲಕ್ಷ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆ ಬರೆಯಬೇಕಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಮಕ್ಕಳು ಅಪಾಯಕ್ಕೆ ಸಿಲುಕಲಿದ್ದಾರೆ. ಈಗಾಗಲೇ ಸಿಬಿಎಸ್‌ಸಿ 10 ಹಾಗೂ 12ನೇ ತರಗತಿ ವಿದ್ಯಾರ್ಥಿಗಳಿಗೆ ಕೋವಿಡ್ ಕಾರಣಕ್ಕಾಗಿಯೇ ಪರೀಕ್ಷೆ ರದ್ದುಪಡಿಸಿದೆ.

ರಾಜ್ಯದಲ್ಲಿಯೂ ಪಿಯು ಪರೀಕ್ಷೆಗಳನ್ನು ರದ್ದುಪಡಿಸಲಾಗಿದೆ. ಅಂತೆಯೇ, ಎಸ್ಎಸ್ಎಲ್​ಸಿ ವಿದ್ಯಾರ್ಥಿಗಳಿಗೂ ಪರೀಕ್ಷೆ ನಡೆಸದಂತೆ ಸರ್ಕಾರ ಹಾಗೂ ಪ್ರಾಧಿಕಾರಗಳಿಗೆ ನಿರ್ದೇಶಿಸಬೇಕು. ಪರೀಕ್ಷೆ ನಡೆಸುವ ಸಂಬಂಧ ಹೊರಡಿಸಿರುವ ನೋಟಿಫಿಕೇಷನ್ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.

ಇದನ್ನೂಓದಿ: ಜುಲೈ 11ರಂದು ನೂತನ ರಾಜ್ಯಪಾಲರಾಗಿ ಥಾವರ್ ಚಂದ್ ಗೆಹ್ಲೋಟ್ ಪ್ರಮಾಣವಚನ ಸ್ವೀಕಾರ

ABOUT THE AUTHOR

...view details