ಕರ್ನಾಟಕ

karnataka

ETV Bharat / state

ಜಿಂದಾಲ್​ಗೆ ಸರ್ಕಾರಿ ಭೂಮಿ ಪರಭಾರೆ ಪ್ರಶ್ನಿಸಿ ಹೈಕೋರ್ಟ್‍ಗೆ ಪಿಐಎಲ್ - ಹೈಕೋರ್ಟ್‍ಗೆ ಪಿಐಎಲ್

ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಜಮೀನನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥ ಪಡಿಸಿರುವ ಹೈಕೋರ್ಟ್ ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿ ನೀಡಿದೆ.

highcourt
highcourt

By

Published : May 25, 2021, 9:55 PM IST

ಬೆಂಗಳೂರು:ಬಳ್ಳಾರಿಯ ಸಂಡೂರಿನಲ್ಲಿ ಜಿಂದಾಲ್ ಕಂಪನಿಗೆ ಸರ್ಕಾರ 3,667 ಎಕರೆ ಜಮೀನನ್ನು ನಿಯಮ ಬಾಹಿರವಾಗಿ ಮಂಜೂರು ಮಾಡಿದೆ ಎಂದು ಆರೋಪಿಸಿ ಸಲ್ಲಿಸಿದ್ದ ಅರ್ಜಿಯನ್ನು ಇತ್ಯರ್ಥ ಪಡಿಸಿರುವ ಹೈಕೋರ್ಟ್ ಹೊಸದಾಗಿ ಅರ್ಜಿ ಸಲ್ಲಿಸಲು ಅನುಮತಿಸಿದೆ.

ಈ ಕುರಿತು ಕೆ.ಎ. ಪಾಲ್ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಜಮೀನು ಪರಭಾರೆ ಆಗಿರುವ ಜಿಂದಾಲ್ ಸಂಸ್ಥೆಯನ್ನು ಅರ್ಜಿಯಲ್ಲಿ ಪ್ರತಿವಾದಿಯನ್ನಾಗಿ ಮಾಡಿಲ್ಲ. ಇದಲ್ಲದೇ ಅರ್ಜಿಯಲ್ಲಿ ಕೆಲವು ತಾಂತ್ರಿಕ ನ್ಯೂನತೆಗಳಿವೆ. ಹೀಗಾಗಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಾಗುವುದಿಲ್ಲ ಎಂದಿತು.

ಇದಕ್ಕೆ ಪ್ರತಿಕ್ರಿಯಿಸಿದ ಅಜಿರ್ದಾರರ ಪರ ವಕೀಲರು, ಮೊದಲು ಅರ್ಜಿಯಲ್ಲಿರುವ ಗೊಂದಲಗಳನ್ನು ಸರಿಪಡಿಸುವುದಾಗಿ ತಿಳಿಸಿದರು. ಹಾಗೆಯೇ, ನ್ಯಾಯಾಲಯ ಸಮ್ಮತಿಸಿದರೆ ಈ ಅರ್ಜಿ ವಾಪಸ್ ಪಡೆದು ಹೊಸದಾಗಿ ಅರ್ಜಿ ಸಲ್ಲಿಸುವುದಾಗಿ ಪೀಠಕ್ಕೆ ತಿಳಿಸಿದರು. ಹೇಳಿಕೆ ಪರಿಗಣಿಸಿದ ಪೀಠ, ಮರು ಅರ್ಜಿ ಸಲ್ಲಿಸಲು ಅವಕಾಶ ನೀಡಿ ಅರ್ಜಿ ಇತ್ಯರ್ಥ ಪಡಿಸಿತು.

ಪ್ರಕರಣದ ಹಿನ್ನೆಲೆ :

ಜಿಂದಾಲ್ ಸಂಸ್ಥೆಗೆ ಸುಮಾರು 3,667 ಎಕರೆ ಭೂಮಿಯನ್ನು ಸರ್ಕಾರ ಇತ್ತೀಚೆಗೆ ಮಂಜೂರು ಮಾಡಿದೆ. ಇದು ನಿಯಮಬಾಹಿರ ಎಂದು ಆರೋಪಿಸಿರುವ ಅರ್ಜಿದಾರರು, ಸರ್ಕಾರ ತರಾತುರಿಯಲ್ಲಿ ಸಚಿವ ಸಂಪುಟ ಸಭೆ ನಡೆಸಿ, ಜಮೀನನ್ನು ಖಾಸಗಿ ಸಂಸ್ಥೆಗೆ ನೀಡಿದೆ. ಅಲ್ಲದೇ, ಜಿಂದಾಲ್ ಸಂಸ್ಥೆ ಕಾನೂನು ಬಾಹಿರ ಚಟುವಟಿಕೆ ನಡೆಸಿರುವ ಕುರಿತು ಲೋಕಾಯುಕ್ತ ತನಿಖಾ ವರದಿಯಲ್ಲಿ ಉಲ್ಲೇಖಿಸಿದೆ. ಸಂಸ್ಥೆಯಿಂದ ಸರ್ಕಾರಕ್ಕೆ 1,078 ಕೋಟಿ ರೂ.ಗಳ ರಾಜಧನ ಬರಬೇಕಿದೆ. ಈ ಸಂಬಂಧ ಹೈಕೋರ್ಟ್, ಸುಪ್ರೀಂಕೋರ್ಟ್ ಮತ್ತು ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ಸಲ್ಲಿಸಿದ್ದು, ವಿಚಾರಣೆ ಹಂತದಲ್ಲಿವೆ. ಹೀಗಾಗಿ ಜಮೀನು ಪರಭಾರೆ ನಿರ್ಧಾರವನ್ನು ಹಿಂಪಡೆಯಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು.

ABOUT THE AUTHOR

...view details