ಬೆಂಗಳೂರು: ರಾಜ್ಯದಲ್ಲಿ ಇದೇ ಆಗಸ್ಟ್ 19 ರಂದು ನಡೆಯಲಿರುವ ಕಾಮೆಡ್-ಕೆ ಪರೀಕ್ಷೆಯನ್ನು ಮುಂದೂಡುವಂತೆ ಕೋರಿ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ನಗರದ ವಕೀಲ ಅಬ್ದುಲ್ಲಾ ಮನ್ನನ್ ಖಾನ್ ಈ ಅರ್ಜಿ ಸಲ್ಲಿಸಿದ್ದು, ವಿಚಾರಣೆಗೆ ಸಮಯ ನಿಗದಿಯಾಗಬೇಕಿದೆ. ಸುಮಾರು 70 ರಿಂದ 80 ಸಾವಿರ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಒಂದು ವೇಳೆ ಪರೀಕ್ಷೆ ನಡೆದಲ್ಲಿ ಅಷ್ಟೂ ವಿದ್ಯಾರ್ಥಿಗಳು ಕೊರೊನಾ ಅಪಾಯಕ್ಕೆ ಸಿಲುಕಲಿದ್ದಾರೆ. ಸದ್ಯ ಕಾಮೆಡ್-ಕೆ ಪರೀಕ್ಷೆ ನಡೆಸುವ ಯಾವುದೇ ತುರ್ತು ಇರಲಿಲ್ಲ. ಹಾಗೆಯೇ ಈ ಪರೀಕ್ಷೆ ನಡೆಸದಿದ್ದರೆ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಅಲ್ಲದೇ ಕೊರೊನಾ ದೇಶಾದ್ಯಂತ ತೀವ್ರವಾಗಿ ವ್ಯಾಪಿಸುತ್ತಿದ್ದು, ಸೋಂಕಿತರು ಮತ್ತು ಮೃತರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಲೇ ಇದೆ. ಈ ಹಿಂದೆ ಸಿಇಟಿ ಪರೀಕ್ಷೆ ನಡೆಸಿದ್ದ ಕೆಎಟಿ ಸಾಮಾಜಿಕ ಅಂತರ ಪಾಲನೆ ಕಾಪಾಡಿಕೊಳ್ಳುವಲ್ಲಿ ಯಶಸ್ವಿಯಾಗಿರಲಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.
ಕಾಮೆಡ್-ಕೆ ಪರೀಕ್ಷೆಯು 300 ಕೇಂದ್ರಗಳಲ್ಲಿ ನಡೆಯುತ್ತಿದ್ದು ಪರೀಕ್ಷೆ ಬರೆಯಲು ದೇಶದ ವಿವಿಧೆಡೆಯಿಂದ ವಿದ್ಯಾರ್ಥಿಗಳು ಬರಲಿದ್ದಾರೆ. ಇದರಿಂದ ಸಾಕಷ್ಟು ಸಮಸ್ಯೆ ಉಂಟಾಗಲಿದೆ. ಇವೆಲ್ಲವನ್ನೂ ಮನಗಂಡು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ತನ್ನ ಜೆಇಇ, ಎನ್ಇಇಟಿ, ಎಐಬಿಇ, ಸಿಎಲ್ಎಟಿ ಪರೀಕ್ಷೆಗಳನ್ನು ಮುಂದೂಡಿದೆ. ಹಾಗಾಗಿ ಕಾಮೆಡ್-ಕೆ ಪರೀಕ್ಷೆಯನ್ನು ಮುಂದೂಡಬೇಕು ಎಂದು ಅರ್ಜಿದಾರ ವಕೀಲ ಅಬ್ದುಲ್ಲಾ ಮನ್ನನ್ನ ಖಾನ್ ಕೋರಿದ್ದಾರೆ.
ಈ ಹಿಂದೆ ಸಿಇಟಿ ಪರೀಕ್ಷೆಗಳನ್ನು ಮುಂದೂಡುವಂತೆ ಇದೇ ವಕೀಲರು ಹೈಕೋರ್ಟ್‌ನಲ್ಲಿ ಪಿಐಎಲ್ ಅರ್ಜಿ ಸಲ್ಲಿಸಿದ್ದರು. ಆದರೆ ಸರ್ಕಾರ ತನ್ನ ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪರೀಕ್ಷೆ ನಡೆಸುವುದಾಗಿ ತಿಳಿಸಿದ್ದಲ್ಲದೇ, ತನ್ನ ನಿರ್ಧಾರದಿಂದ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ತಿಳಿಸಿತ್ತು. ಜತೆಗೆ ಅರ್ಜಿ ಸಲ್ಲಿಕೆಯೂ ತಡವಾಗಿದ್ದರಿಂದ ಸಿಇಟಿ ಪರೀಕ್ಷೆಗೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿತ್ತು.