ಕರ್ನಾಟಕ

karnataka

ETV Bharat / state

ಕಪಾಲ ಬೆಟ್ಟದ ಭೂಮಿ ಮಂಜೂರು; ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ಗೆ ಪಿಐಎಲ್ - PIL news

ಕನಕಪುರ ತಾಲೂಕಿನ ಕಪಾಲ ಬೆಟ್ಟದ 10 ಎಕರೆ ಭೂಮಿಯನ್ನು ಚರ್ಚ್ ನಿರ್ಮಿಸಲು ಹಾಗೂ ಕ್ರೈಸ್ತ ಧರ್ಮದ ಚಟುವಟಿಕೆಗಳನ್ನು ನಿರ್ವಹಿಸಲು ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್​ಗೆ ಮಂಜೂರು ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ಈ ಭೂಮಿ ಮಂಜೂರು ಮಾಡಿಸಿಕೊಂಡಿದ್ದಾರೆ ಎಂದಿರುವ ಅರ್ಜಿದಾರರು ಆದೇಶ ರದ್ದುಗೊಳಿಸುವಂತೆ ಕೋರಿದ್ದಾರೆ.

PIL to High Court challenging government order
ಹೈಕೋರ್ಟ್

By

Published : Oct 9, 2020, 11:18 PM IST

ಬೆಂಗಳೂರು :ರಾಮನಗರ ಜಿಲ್ಲೆಯ ಕನಕಪುರ ತಾಲೂಕಿನ ಕಪಾಲ ಬೆಟ್ಟದಲ್ಲಿ ಚರ್ಚ್ ನಿರ್ಮಿಸಲು 10 ಎಕರೆ ಭೂಮಿಯನ್ನು ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್​ಗೆ ಮಂಜೂರು ಮಾಡಿದ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ಹಾರೋಬೆಲೆ ಗ್ರಾಮದ ನಿವಾಸಿಗಳಾದ ಅಂಥೋಣಿ ಸ್ವಾಮಿ ಮತ್ತಿತರೆ 8 ಮಂದಿ ಸರ್ಕಾರದ ಆದೇಶ ಪ್ರಶ್ನಿಸಿ ಹೈಕೋರ್ಟ್​ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಅರ್ಜಿಯಲ್ಲಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಮನಗರ ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ಕನಕಪುರ ತಹಶೀಲ್ದಾರ್ ಹಾಗೂ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಅನ್ನು ಪ್ರತಿವಾದಿಯನ್ನಾಗಿ ಹೆಸರಿಸಲಾಗಿದೆ. ಅರ್ಜಿ ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

ಅರ್ಜಿದಾರರ ಕೋರಿಕೆ :

ಕನಕಪುರ ತಾಲೂಕಿನ ನಲ್ಲಹಳ್ಳಿ ಗ್ರಾಮದ ಸರ್ವೆ ನಂಬರ್ 283 ರಲ್ಲಿನ ಕಪಾಲ ಬೆಟ್ಟದ 10 ಎಕರೆ ಭೂಮಿಯನ್ನು ಚರ್ಚ್ ನಿರ್ಮಿಸಲು ಹಾಗೂ ಕ್ರೈಸ್ತ ಧರ್ಮದ ಚಟುವಟಿಕೆಗಳನ್ನು ನಿರ್ವಹಿಸಲು ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್​ಗೆ ಮಂಜೂರು ಮಾಡಲಾಗಿದೆ. 2018ರ ಫೆಬ್ರವರಿ 26ರಂದು ಸರ್ಕಾರ ಟ್ರಸ್ಟ್​ಗೆ ಭೂಮಿ ಮಂಜೂರು ಮಾಡಿ ಆದೇಶ ಹೊರಡಿಸಿದೆ. ಇದನ್ನು ಪ್ರಶ್ನಿಸಿರುವ ಅರ್ಜಿದಾರರು, ವಾಸ್ತವವಾಗಿ ಕಪಾಲ ಬೆಟ್ಟದಲ್ಲಿ ಕ್ರೈಸ್ತ ಧರ್ಮೀಯ ಚಟುವಟಿಕೆಗಳನ್ನು ನಡೆಸಲು ಕ್ರಿಶ್ಚಿಯನ್ನರು ಮನವಿ ಸಲ್ಲಿಸಿಲ್ಲ. ಡಿಕೆ ಸಹೋದರರು ತಮ್ಮ ಸ್ವಹಿತಾಸಕ್ತಿ ಸಾಧನೆಗಾಗಿ ಹಾಗೂ ಕನಕಪುರದಲ್ಲಿ ಮತ ಬ್ಯಾಂಕ್ ಸೃಷ್ಟಿಸಿಕೊಳ್ಳಲು ಟ್ರಸ್ಟ್​ಗೆ ಜಮೀನು ಮಂಜೂರು ಮಾಡುವಂತೆ ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. ಅದರಂತೆ ಭೂಮಿ ಮಂಜೂರು ಮಾಡಲಾಗಿದೆ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

ಅಲ್ಲದೆ, ಕಪಾಲ ಬೆಟ್ಟ ಹುಲ್ಲುಗಾವಲು ಪ್ರದೇಶವಾಗಿದ್ದು ಸುತ್ತಮುತ್ತಲ ಗ್ರಾಮಗಳಲ್ಲಿ ಜಾನುವಾರುಗಳ ಮೇವಿಗೆ ಮೀಸಲಿಡಲಾಗಿದೆ. ಹೀಗಾಗಿ ಈ ಪ್ರದೇಶವನ್ನು ಸಂರಕ್ಷಿಸಬೇಕು. ಸುಪ್ರೀಂಕೋರ್ಟ್ ಕೂಡ ಸರ್ಕಾರಿ ಜಮೀನನ್ನು ಖಾಸಗಿ ವ್ಯಕ್ತಿಗಳ ಸ್ವಂತ ಲಾಭಕ್ಕಾಗಿ ಅಥವಾ ಯಾವುದೇ ಧಾರ್ಮಿಕ ಚಟುವಟಿಕೆಗಳ ಬಳಕೆಗೆ ನೀಡಬಾರದು ಎಂದು ಪ್ರಕರಣವೊಂದರಲ್ಲಿ ಆದೇಶಿಸಿದೆ. ಆದ್ದರಿಂದ ಬೆಟ್ಟದಲ್ಲಿ ಕೈಗೊಂಡಿರುವ ಚರ್ಚ್ ನಿರ್ಮಾಣ ಹಾಗೂ ಇತರೆ ಕಾಮಗಾರಿಗಳನ್ನು ನಿಲ್ಲಿಸಲು ನ್ಯಾಯಾಲಯ ಆದೇಶಿಸಬೇಕು ಹಾಗೂ ಜಮೀನು ಮಂಜೂರು ಮಾಡಿರುವ ಸರ್ಕಾರದ ಆದೇಶವನ್ನು ರದ್ದು ಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.

ABOUT THE AUTHOR

...view details