ಬೆಂಗಳೂರು:ನಗರದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುವ ಉದ್ಯೋಗಿಗಳಿಗೆ ಅವೈಜ್ಞಾನಿಕವಾಗಿ ಉಸಿರಾಟ ಪರೀಕ್ಷೆ (ಬ್ರೇತ್ ಅನಲೈಸ್) ಮಾಡುತ್ತಿರುವುದನ್ನು ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದ್ದು, ಈ ಸಂಬಂಧ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಇದೇ ವೇಳೆ ಕೊರೊನಾ ವೈರಸ್ ಹರಡದಂತೆ ತಡೆಯಲು ಬ್ರೇತ್ ಅನಲೈಸರ್ ಪರೀಕ್ಷೆಯನ್ನು ತಾತ್ಕಾಲಿಕವಾಗಿ ನಡೆಸದಂತೆಯೂ ಏರ್ಪೋರ್ಟ್ ಆಡಳಿತ ವಿಭಾಗಕ್ಕೆ ಸೂಚಿಸಿದೆ. ದೇಶವು ಕೊರೊನಾ ವೈರಸ್ ಸೋಂಕು ಮುಕ್ತವಾಗುವವರೆಗೆ ದೇಶದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಉಸಿರಾಟ ತಪಾಸಣಾ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸುವಂತೆ ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಏರ್ ಟ್ರಾಫಿಕ್ ಕಂಟ್ರೋಲರ್ಸ್ ಗಿಲ್ಡ್ (ಇಂಡಿಯಾ) ಸಂಸ್ಥೆಯ ಬೆಂಗಳೂರು ಶಾಖೆ ಕಾರ್ಯದರ್ಶಿ ಕೆ.ಟಿ.ಅನೂಪ್ ಸಲ್ಲಿಸಿರುವ ಪಿಐಎಲ್ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.