ಬೆಂಗಳೂರು: ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ)ಯನ್ನು ಸಾಂವಿಧಾನಿಕ ಸ್ವತಂತ್ರ ಸಂಸ್ಥೆಯಾಗಿ ರೂಪಿಸಲು ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಬೇಸಿಗೆ ರಜೆ ನಂತರ ವಿಚಾರಣೆ ನಡೆಸಲು ನಿರ್ಧರಿಸಿದೆ. ಈ ಕುರಿತಂತೆ ಬೀದರ್ ಜಿಲ್ಲೆಯ ಗುರುನಾಥ್ ವದ್ದೆ ಎಂಬುವರು ಪಿಐಎಲ್ ಸಲ್ಲಿಸಿದ್ದು, ಕೇಂದ್ರ ಗೃಹ ಇಲಾಖೆ ಕಾರ್ಯದರ್ಶಿ ಮತ್ತು ಸಿಬಿಐ ನಿದೇರ್ಶಕರನ್ನು ಪ್ರತಿವಾದಿಯಾಗಿ ಹೆಸರಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ನ್ಯಾ.ಬಿ.ಎಂ.ಶ್ಯಾಮ್ ಪ್ರಸಾದ್ ಮತ್ತು ನ್ಯಾ. ಎಂ.ಜಿ.ಎಸ್ ಕಮಲ್ ಅವರಿದ್ದ ವಿಭಾಗೀಯ ಪೀಠ ನಡೆಸಿತು.
ಅರ್ಜಿದಾರರ ಮನವಿ:ದೆಹಲಿ ಸ್ಪೆಷಲ್ ಪೊಲೀಸ್ ಎಸ್ಟಾಬ್ಲಿಷ್ಮೆಂಟ್ (ಡಿಎಸ್‌ಪಿಇ) ಕಾಯ್ದೆ-1946ರ ಅಡಿಯಲ್ಲಿ ಸಿಬಿಐ ರಚಿಸಲಾಗಿದೆ. ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿರುವ ಸಿಬಿಐಗೆ ಸ್ವತಂತ್ರವಾಗಿ ಮತ್ತು ನಿಷ್ಪಕ್ಷಪಾತವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಸಿಬಿಐ ಕೇಂದ್ರ ಸರ್ಕಾರದ ನಿಯಂತ್ರಣದಲ್ಲಿದೆ ಎಂದು ರಾಜ್ಯ ಸರ್ಕಾರಗಳು ಮತ್ತು ರಾಜಕೀಯ ಪಕ್ಷಗಳು ಅರೋಪಿಸುವುದು ಸಾಮಾನ್ಯವಾಗಿದೆ.
ಕೇಂದ್ರ ಸರ್ಕಾರ ಸಿಬಿಐನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ವ್ಯಾಪಕ ಆರೋಪವಿದ್ದು, ಸಂಸ್ಥೆಯ ಮೇಲೆ ಸಾರ್ವಜನಿಕ ನಂಬಿಕೆಯೂ ಕ್ಷೀಣಿಸುತ್ತಿದೆ. ಭ್ರಷ್ಟಾಚಾರ-ಪಕ್ಷಪಾತರಹಿತ ಮತ್ತು ಪಾರದರ್ಶಕ ತನಿಖೆ ನಡೆಸುವಂತಹ ಸ್ವತಂತ್ರ ಸಂಸ್ಥೆಯು ದೇಶದ ಪ್ರಜೆಗಳ ಹಕ್ಕು. ಇತ್ತೀಚೆಗೆ ದೇಶದಲ್ಲಿ ಚುನಾವಣೆ ವೇಳೆ ಮತ್ತು ನಂತರ ರಾಜಕೀಯ ಅಪರಾಧಗಳು, ರಾಜಕೀಯಪ್ರೇರಿತ ಕೊಲೆಗಳು ನಡೆಯುತ್ತಿವೆ. ಜಾತಿ, ಮತ, ಭಾಷೆ ಮತ್ತು ಪ್ರಾದೇಶಿಕತೆ ಹೆಸರಿನಲ್ಲಿ ದಂಗೆಗಳು ಹೆಚ್ಚುತ್ತಿವೆ. ದೊಡ್ಡ ದೊಡ್ಡ ಹಗರಣಗಳು ಬೆಳಕಿಗೆ ಬರುತ್ತಿದೆ.
ಹೀಗಾಗಿ, ಸಿಬಿಐನ್ನು ಸ್ವತಂತ್ರ ಸಾಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸುವ ಅಗತ್ಯವಿದೆ, ಪ್ರಜಾಪ್ರಭುತ್ವ ವ್ಯವಸ್ಥೆ ಹೊಂದಿರುವ ದೇಶದಲ್ಲಿ ಸಂವಿಧಾನ ಮತ್ತು ನಾಗರಿಕರ ಹಿತದೃಷ್ಟಿಯಿಂದ ಸ್ವತಂತ್ರ ತನಿಖಾ ಸಂಸ್ಥೆ ಇರಬೇಕಿದೆ. ಸಾಂವಿಧಾನಿಕ ಸ್ವತಂತ್ರ ತನಿಖಾ ಸಂಸ್ಥೆಗಳಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಸ್ತಕ್ಷೇಪ ಮಾಡುವಂತಿರಬಾರದು. ಹಾಗಾಗಿ, ಸಿಬಿಐ ಅನ್ನು ಸ್ವತಂತ್ರ ಸಂವಿಧಾನಿಕ ತನಿಖಾ ಸಂಸ್ಥೆಯಾಗಿ ರೂಪಿಸುವಂತೆ ಕೋರಿ 2022ರ ಏಪ್ರಿಲ್ 8ರಂದು ಕೇಂದ್ರಕ್ಕೆ ಮನವಿ ಸಲ್ಲಿಸಿದ್ದು, ಪರಿಗಣಿಸಿ ಅಗತ್ಯ ಕ್ರಮ ಜರುಗಿಸುವಂತೆ ಕೇಂದ್ರ ಗೃಹ ಇಲಾಖೆಗೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಇದನ್ನೂ ಓದಿ:ತಾಜ್ಮಹಲ್ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್ ಕೋರ್ಟ್