ಬೆಂಗಳೂರು:ಬಹುಚರ್ಚಿತ ಭೂಸುಧಾರಣೆ ಕಾಯ್ದೆಗೆ ತಿದ್ದುಪಡಿ ತಂದಿರುವ ರಾಜ್ಯ ಸರ್ಕಾರದ ಕ್ರಮ ಪ್ರಶ್ನಿಸಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಬಾಗಲಕೋಟೆ ಜಿಲ್ಲೆಯ ಇಳಕಲ್ ಮೂಲದ ಸಾಮಾಜಿಕ ಕಾರ್ಯಕರ್ತ ನಾಗರಾಜ ಶೇಷಪ್ಪ ಹೊಂಗಲ್ ಎಂಬುವವರು ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸಲ್ಲಿಸಿದ್ದಾರೆ. ಅರ್ಜಿಯಲ್ಲಿ ಕಂದಾಯ ಇಲಾಖೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯನ್ನು ಪ್ರತಿವಾದಿಯಾಗಿ ಮಾಡಲಾಗಿದೆ.
ಅರ್ಜಿದಾರರ ಮನವಿ :
ಭೂಮಿಯ ಒಡೆತನ, ಖರೀದಿ ಮತ್ತು ವರ್ಗಾವಣೆಗೆ ಸಂಬಂಧಿಸಿದಂತೆ ಕಾಯ್ದೆಯಲ್ಲಿದ್ದ ಮಿತಿ ಹಾಗೂ ನಿಬಂಧನೆಗಳನ್ನು ತೆಗೆದುಹಾಕಿ ರಾಜ್ಯ ಸರ್ಕಾರ ಆದೇಶ ಹೊರಡಿಸಿರುವುದು ಕಾನೂನು ಬಾಹಿರ. ಬ್ರಿಟಿಷ್ ಕಾಲದ ಜಮೀನ್ದಾರಿ ಪದ್ಧತಿಯನ್ನು ಹುಟ್ಟುಹಾಕಲು ಅನುಕೂಲವಾಗಿರುವ ಸರ್ಕಾರದ ಈ ಕ್ರಮ ಸಂವಿಧಾನದ ಮೂಲ ಆಶಯಗಳಿಗೆ ವಿರುದ್ಧವಾಗಿದೆ. ಹಾಗೆಯೇ, ಕೃಷಿ ಮತ್ತು ಪರಿಸರಕ್ಕೆ ಮಾರಕವಾಗಲಿದೆ ಎಂದು ದೂರಿರುವ ಅರ್ಜಿದಾರರು, ಅಧ್ಯಾದೇಶವನ್ನು ರದ್ದುಪಡಿಸಬೇಕು ಹಾಗೂ ಅರ್ಜಿ ಇತ್ಯರ್ಥ ಆಗುವವರೆಗೆ ತಡೆ ನೀಡಬೇಕು ಎಂದು ಮನವಿ ಮಾಡಿದ್ದಾರೆ.