ಬೆಂಗಳೂರು :ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಅಸಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಅಕ್ಟೋಬರ್ 5ಕ್ಕೆ ಮುಂದೂಡಿದೆ.
ನಗರದ ಮೊಹಮ್ಮದ್ ಆರೀಫ್ ಜಮೀಲ್, ಪೀಪಲ್ಸ್ ಯುನಿಟಿ ಫಾರ್ ಸಿವಿಲ್ ಲಿರ್ಬಟೀಸ್ ಆ್ಯಂಡ್ ಹ್ಯೂಮನ್ ರೈಟ್ಸ್ ಫೋರಂ ಮತ್ತಿತರ ಸಂಘಟನೆಗಳು ಪ್ರತ್ಯೇಕವಾಗಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅಜಿರ್ಗಳು ಇಂದು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠದ ಎದುರು ವಿಚಾರಣೆಗೆ ನಿಗದಿಯಾಗಿದ್ದವು. ಕಲಾಪ ಆರಂಭವಾಗುತ್ತಿದ್ದಂತೆ ಕೇಂದ್ರ ಸರ್ಕಾರದ ಪರ ಸಹಾಯಕ ಸಾಲಿಸಿಟರ್ ಜನರಲ್ ಸಿ. ಶಶಿಕಾಂತ್ ವಾದಿಸಿ, ಸಿಎಎ ಹಾಗೂ ಎನ್ಆರ್‌ಸಿಗೆ ಸಂಬಂಧಿಸಿದಂತೆ ದೇಶದ ಹಲವು ಹೈಕೋರ್ಟ್‌ಗಳಲ್ಲಿ ಪಿಐಎಲ್ಗಳನ್ನು ಸಲ್ಲಿಸಲಾಗಿದೆ.
ಆದರೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿಯೂ ಅರ್ಜಿ ಸಲ್ಲಿಸಲಾಗಿದೆ. ಈ ಅರ್ಜಿ ವಿಚಾರಣಾ ಹಂತದಲ್ಲಿದ್ದು, ಸಿಎಎಗೆ ಸಂಬಂಧಿಸಿದ ಅರ್ಜಿಗಳನ್ನು ಯಾವುದೇ ಹೈಕೋರ್ಟ್‌ಗಳು ವಿಚಾರಣೆ ನಡೆಸದಂತೆ ಸುಪ್ರೀಂಕೋರ್ಟ್ ನಿರ್ದೇಶಿಸಿದೆ. ಸುಪ್ರೀಂ ಆದೇಶ ಇನ್ನೂ ಚಾಲ್ತಿಯಲ್ಲಿರುವುದರಿಂದ, ಪಿಐಎಲ್ ವಿಚಾರಣೆ ಮುಂದೂಡಬೇಕು ಎಂದು ಮನವಿ ಮಾಡಿದರು. ಕೇಂದ್ರದ ಪರ ವಕೀಲರ ವಾದ ಪರಿಗಣಿಸಿದ ಪೀಠ, ಅರ್ಜಿ ವಿಚಾರಣೆಯನ್ನು ಅ.5ಕ್ಕೆ ಮುಂದೂಡಿತು.
ಅರ್ಜಿದಾರರ ಮನವಿ :
ಪೌರತ್ವ ಕಾಯ್ದೆಗೆ ಧರ್ಮದ ಆಧಾರದ ಮೇಲೆ ತಿದ್ದುಪಡಿ ತಂದಿರುವುದು ಸಂವಿಧಾನದ ವಿಧಿ 14ಕ್ಕೆ ವಿರುದ್ಧವಾಗಿದೆ. ಇದು ದೇಶದ ನಾಗರಿಕರ ಮಧ್ಯೆ ತಾರತಮ್ಯ ಮೂಡಿಸುತ್ತದೆ. ಆದ್ದರಿಂದ, ತಿದ್ದುಪಡಿ ಕಾಯ್ದೆಯನ್ನು ಅಸಾಂವಿಧಾನಿಕ ಎಂದು ಘೋಷಿಸಬೇಕು. ಪಿಐಎಲ್ ಇತ್ಯರ್ಥಗೊಳ್ಳುವವರೆಗೆ ಕಾಯ್ದೆಯನ್ನು ಜಾರಿಗೆ ತರದಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ.