ಬೆಂಗಳೂರು:ಮುಂಗಾರು ಸಮಯದಲ್ಲಿ ಹಾರಂಗಿ ಜಲಾಯಶವನ್ನು ಸೂಕ್ತ ರೀತಿಯಲ್ಲಿ ನಿರ್ವಹಣೆ ಮಾಡದಿರುವುದರಿಂದಲೇ ಕೊಡಗು ಸುತ್ತಮುತ್ತಲ ಪ್ರದೇಶಗಳಲ್ಲಿ ಪ್ರವಾಹ, ಭೂ ಕುಸಿತ ಮತ್ತಿತರ ಸಮಸ್ಯೆಗಳಾಗುತ್ತಿವೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಹಾರಂಗಿ ಡ್ಯಾಮ್ ನಿರ್ವಹಣೆ ಕೋರಿ ಪಿಐಎಲ್: ಆಕ್ಷೇಪಣೆ ಸಲ್ಲಿಸಲು ಪ್ರತಿವಾದಿಗಳಿಗೆ ಸೂಚನೆ - ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ
ಕೊಡಗು ಜಿಲ್ಲೆಯ ಹಾರಂಗಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿದ್ದು, ಜಲಾಶಯದ ಶೇ.50ರಷ್ಟು ನೀರನ್ನು ಹೊರ ಬಿಡುವಂತೆ ಕೋರಿ ಹೈಕೋರ್ಟ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಈ ಬಗ್ಗೆ ವಾದ ಆಲಿಸಿದ ಪೀಠ ಜಲಾಶಯದ ನಿರ್ವಹಣೆಯಲ್ಲಿ ಪ್ರಾಧಿಕಾರಗಳ ಜವಾಬ್ದಾರಿ ಇರುವುದರಿಂದ ಪ್ರತಿವಾದಿಗಳಿಗೆ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಜಲಾಶಯವನ್ನು ವೈಜ್ಞಾನಿಕವಾಗಿ ನಿರ್ವಹಣೆ ಮಾಡಲು ನಿರ್ದೇಶಿಸುವಂತೆ ಕೋರಿ ಕೊಡಗಿನ ನಂದ ಬೆಳ್ಳಿಯಪ್ಪ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ, ಅರ್ಜಿದಾರರ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕೊಡಗು ಸುತ್ತ ಮುತ್ತ ಭಾರಿ ಮಳೆಯಾಗುತ್ತಿದೆ. ಸದ್ಯ ಹಾರಂಗಿ ಜಲಾಶಯ ಪೂರ್ಣ ಪ್ರಮಾಣದಲ್ಲಿ ತುಂಬಿ ತುಳುಕುತ್ತಿದ್ದು, ಆನೆ ಕಾರಿಡಾರ್ ಕೂಡ ನೀರಿನಲ್ಲಿ ಮುಚ್ಚಿಹೋಗಿದೆ. ಹೀಗಾಗಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಿ ಜಲಾಶಯದ ಶೇ.50ರಷ್ಟು ನೀರನ್ನು ಹೊರಬಿಡಲು ನಿರ್ದೇಶಿಸಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಜಲಾಶಯ ನಿರ್ವಹಣೆ ವಿಚಾರದಲ್ಲಿ ನಿರ್ಧಾರ ಕೈಗೊಳ್ಳಲು ನಾವು ತಜ್ಞರಲ್ಲ. ಹೀಗಾಗಿ ಮಧ್ಯಂತರ ಮನವಿಯನ್ನು ಈಗಲೇ ಪುರಸ್ಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿತು. ಜೊತೆಗೆ ಜಲಾಶಯ ನಿರ್ವಹಣೆಯಲ್ಲಿ ಸಾಕಷ್ಟು ಪ್ರಾಧಿಕಾರಗಳ ಜವಾಬ್ದಾರಿ ಹೊಂದಿರುವುದರಿಂದ ಪ್ರತಿವಾದಿಗಳು ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 11 ಕ್ಕೆ ಮುಂದೂಡಿತು.