ಬೆಂಗಳೂರು: ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪರಿಷ್ಕರಣೆಗೆ, ವೈಯುಕ್ತಿಕ ಮಾಹಿತಿ ಕಲೆ ಹಾಕಲು, ಮನೆ ಮನೆಗೆ ಭೇಟಿ ನೀಡಿ ಕ್ಷೇತ್ರ ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ನಡೆಸಿದೆ. 2019ರ ಜುಲೈ 31ರಂದು ಹೊರಡಿಸಿರುವ ಈ ಅಧಿಸೂಚನೆಯನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ ಅರ್ಜಿ ಸಲ್ಲಿಸಲಾಗಿದೆ.
ರಾಷ್ಟ್ರೀಯ ಜನಸಂಖ್ಯಾ ನೋಂದಣಿ ಅಧಿಸೂಚನೆ ಪ್ರಶ್ನಿಸಿ ಹೈಕೋರ್ಟ್‌ಗೆ ಪಿಐಎಲ್ - ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್
ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಪರಿಷ್ಕರಣೆಗೆ, ವೈಯುಕ್ತಿಕ ಮಾಹಿತಿ ಕಲೆಹಾಕಲು, ಮನೆ ಮನೆಗೆ ಭೇಟಿ ನೀಡಿ ಕ್ಷೇತ್ರ ಕಾರ್ಯಾಚರಣೆ ನಡೆಸುವಂತೆ ಕೇಂದ್ರ ಸರ್ಕಾರ ಅಧಿಸೂಚನೆ ನಡೆಸಿದೆ.
ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ (ಪಿಯುಸಿಎಲ್) ಸಂಘಟನೆ ಸಲ್ಲಿಸಿರುವ, ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ. ಎಸ್. ಓಕಾ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಈ ವಿಚಾರಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್‌ನಲ್ಲಿ ಪ್ರಕರಣ ವಿಚಾರಣಾ ಹಂತದಲ್ಲಿದ್ದರೆ, ಹೈಕೋರ್ಟ್ ವಿಚಾರಣೆ ನಡೆಸಲು ಬರುವುದಿಲ್ಲ. ಹೀಗಾಗಿ ಸುಪ್ರೀಂಕೋರ್ಟ್‌ನಲ್ಲಿ ಯಾವುದಾದರೂ ಅರ್ಜಿ ಸಲ್ಲಿಕೆಯಾಗಿದೆಯಾ ಎಂಬ ಬಗ್ಗೆ ಮಾಹಿತಿ ಸಲ್ಲಿಸುವಂತೆ ವಕೀಲರಿಗೆ ಸೂಚಿಸಿ ವಿಚಾರಣೆಯನ್ನು ಮಾ.30ಕ್ಕೆ ಮುಂದೂಡಿತು.
ಎನ್‌ಪಿಆರ್ ಸಂಬಂಧ ಪೌರತ್ವ (ನಾಗರಿಕರ ನೋಂದಣಿ ಮತ್ತು ರಾಷ್ಟ್ರೀಯ ಗುರುತಿನ ಚೀಟಿ ವಿತರಣೆ) ಅಧಿನಿಯಮದ ಕಲಂ3(4)ರನ್ವಯ, ಕೇಂದ್ರ ಗೃಹ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ರದ್ದುಗೊಳಿಸಬೇಕು. ಹಾಗೆಯೇ ಕೇಂದ್ರ ಸರ್ಕಾರದ ಅಧಿಸೂಚನೆ ಮೇರೆಗೆ, ಕರ್ನಾಟಕ ಗಣತಿ ನಿರ್ದೇಶಕರು ಕಳೆದ ಅಕ್ಟೋಬರ್ 9ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು. ಸಂವಿಧಾನದ ಕಲಂ 14, 19 ಹಾಗೂ 21ಕ್ಕೆ ತದ್ವಿರುದ್ಧವಾಗಿರುವ ಪೌರತ್ವ ತಿದ್ದುಪಡಿ ಕಾಯ್ದೆಯ ಕಲಂ 14(ಎ) ಅನ್ನು ಸಂವಿಧಾನ ಬಾಹಿರ ಎಂದು ಘೋಷಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಅಧಿಸೂಚನೆಗೆ ತಡೆ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.