ಬೆಂಗಳೂರು:ಬಿಬಿಎಂಪಿಗೆ ಹಸ್ತಾಂತರಿಸಲಾಗಿರುವ ಲೇಔಟ್ಗಳಲ್ಲಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಬಿಡಿಎ ಕಾಯ್ದೆಗೆ ತಿದ್ದುಪಡಿ ಮಾಡಿರುವುದನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಕೈಗೆತ್ತಿಕೊಂಡಿದೆ.
ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಆಲಿಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಒಕಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗಡುಮ್ ನೇತೃತ್ವದ ವಿಭಾಗೀಯ ಪೀಠ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳು, ಬಿಡಿಎ ಆಯುಕ್ತ, ನಗರ ಮತ್ತು ಪೌರಾಡಳಿತ ಅಭಿವೃದ್ಧಿ ಇಲಾಖೆಯ ಕಾರ್ಯದರ್ಶಿ ಹಾಗೂ ಇತರರಿಗೆ ನೊಟೀಸ್ ನೀಡಿದೆ.
ವಕೀಲ ಡಾ ಕೆ.ಬಿ ವಿಜಯ್ ಕುಮಾರ್ ತಮ್ಮ ಅರ್ಜಿಯಲ್ಲಿ, ಹಲವು ಲೇಔಟ್ಗಳನ್ನು ಈಗಾಗಲೇ ಬಿಬಿಎಂಪಿಗೆ ಹಸ್ತಾಂತರ ಮಾಡಿದ್ದು, ಅದರ ನಿರ್ವಹಣೆ ಮತ್ತು ಸೂಕ್ತ ತೆರಿಗೆ ಸಂಗ್ರಹಕ್ಕೆ ಸೂಚಿಸಿದೆ. ಹೀಗಾಗಿ ಬಿಡಿಎ ಪ್ರಾಧಿಕಾರದಿಂದ ಅನುಮೋದನೆ ಇಲ್ಲದೆ ಕಟ್ಟಲಾಗಿರುವ ಅಕ್ರಮ ಕಟ್ಟಡಗಳನ್ನು ಸಕ್ರಮಗೊಳಿಸುವ ಅಧಿಕಾರ ಬಿಡಿಎಗಿಲ್ಲ ಎಂದು ವಾದ ಮಂಡಿಸಿದರು.
ಬಿಡಿಎ ತಿದ್ದುಪಡಿ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಕೋರ್ಟ್ಗೆ ಮನವಿ ಮಾಡಿದ ವಕೀಲ, 2007-08ರಿಂದ ಬಿಡಿಎ ಲೇಔಟ್ನಲ್ಲಿ ನಿವೇಶನ ಹೊಂದಿರುವ ಮಾಲೀಕ ಅಥವಾ ಅಂತಹ ಲೇಔಟ್ಗಳನ್ನು ಬಿಬಿಎಂಪಿಗೆ ವರ್ಗಾಯಿಸಿ ಆ ನಿವೇಶನದಲ್ಲಿ ಕಟ್ಟಡ ನಿರ್ಮಿಸುವ ಉದ್ದೇಶ ಹೊಂದಿರುವ ಮಾಲೀಕ ಬಿಬಿಎಂಪಿಯಿಂದ ಅನುಮೋದನೆ ಅಥವಾ ಬಿಲ್ಡಿಂಗ್ ಪ್ಲಾನ್ಗೆ ಅನುಮತಿ ಪಡೆದಿರಬೇಕೆ ಹೊರತು ಬಿಡಿಎಯಿಂದಲ್ಲ ಎಂದು ವಾದ ಮಾಡಿದರು.
ಬಿಡಿಎ ನಿವೇಶನವನ್ನು ಸಕ್ರಮಗೊಳಿಸಿದರೆ ಬಿಲ್ಡಿಂಗ್ ಪ್ಲಾನ್ಗೆ ಅನುಮತಿ ನೀಡುವ ಅಧಿಕಾರ ಸಹಜವಾಗಿ ಬಿಬಿಎಂಪಿಗೆ ಹೋಗುತ್ತದೆ. ಹೀಗಾಗಿ ಬಿಡಿಎ ಅಕ್ರಮ ಅಥವಾ ಅತಿಕ್ರಮಿಸಿದ ನಿವೇಶನಗಳನ್ನು ಸಕ್ರಮಗೊಳಿಸುವ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಎಂದು ವಾದಿಸಿದರು.