ಕರ್ನಾಟಕ

karnataka

ETV Bharat / state

ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಪಿಐಎಲ್: ಆಕ್ಷೇಪಣೆ ಸಲ್ಲಿಸಲು ಸರ್ಕಾರಕ್ಕೆ ಹೈಕೋರ್ಟ್ ಗಡುವು - Amendment Ordinance 2020

ಭೂ ಸುಧಾರಣಾ ಕಾಯ್ದೆ ಕುರಿತು ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಆಲಿಸಿದ ಹೈಕೋರ್ಟ್ ಆಕ್ಷೇಪಣೆ ಗಡುವು ವಿಧಿಸಿದೆ.

PIL In High Court About Karnataka Land Reforms
ಹೈಕೋರ್ಟ್

By

Published : Dec 23, 2020, 3:37 AM IST

ಬೆಂಗಳೂರು : ವಿವಾದಿತ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡುತ್ತಿರುವ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಜನವರಿ 5 ರ ಅಂತಿಮ ಗಡುವು ವಿಧಿಸಿದೆ. ಹಾಗೆಯೇ ಕಾಯ್ದೆಗೆ ಈ ಹಿಂದೆ ನೀಡಿದ ಮಧ್ಯಂತರ ಆದೇಶವನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿದೆ.

ಕಾಯ್ದೆಗೆ ತಿದ್ದುಪಡಿ ತಂದಿರುವ ಸರ್ಕಾರದ ಕ್ರಮ ಪ್ರಶ್ನಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಸೇರಿದಂತೆ ಹಲವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಈ ವೇಳೆ ಸರ್ಕಾರದ ಪರ ವಕೀಲರು ಪೀಠಕ್ಕೆ ಮನವಿ ಮಾಡಿ ಅರ್ಜಿಗೆ ಆಕ್ಷೇಪಣೆಗಳನ್ನು ಸಲ್ಲಿಸಲು ಮತ್ತಷ್ಟು ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದನ್ನೂ ಓದಿ : ಬಿಡಿಎ ಜಾಗದಲ್ಲಿನ ಅಕ್ರಮ ಕಟ್ಟಡ ಸಕ್ರಮ ಕಾಯ್ದೆ; ಸರ್ಕಾರಕ್ಕೆ ಹೈಕೋರ್ಟ್‌ ನೋಟಿಸ್

ಹಾಗೆಯೇ, ಕಾಯ್ದೆಯನ್ನು 2 ಸದನಗಳು ಅನುಮೋದಿಸಿವೆ ಎಂದರು. ಇದಕ್ಕೆ ಅರ್ಜಿದಾರರ ಪರ ವಕೀಲರು ಆಕ್ಷೇಪಿಸಿ, ರಾಜ್ಯಪಾಲರಿಂದ ಕಾಯ್ದೆಗೆ ಅನುಮೋದನೆ ಸಿಕ್ಕಿಲ್ಲ. ಸರ್ಕಾರ ಬೇಕೆಂದೇ ಆಕ್ಷೇಪಣೆ ಸಲ್ಲಿಸಲು ವಿಳಂಬ ಮಾಡುತ್ತಿದೆ. ಹಾಗಾಗಿ ಮತ್ತಷ್ಟು ಕಾಲಾವಕಾಶ ನೀಡಬಾರದು ಎಂದು ಕೋರಿದರು.

ಮಧ್ಯಪ್ರವೇಶಿಸಿದ ಪೀಠ, ಅರ್ಜಿಯಲ್ಲಿ ಅತ್ಯಂತ ಗಂಭೀರ ವಿಚಾರವನ್ನು ಪ್ರಸ್ತಾಪಿಸಲಾಗಿದೆ.‌ ಹೀಗಾಗಿ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದೆ. ವಿಚಾರಣೆ ನಡೆಸುವುದು ಸೂಕ್ತವಲ್ಲ ಎಂದೂ ಅಭಿಪ್ರಾಯಪಟ್ಟಿತು. ಹಾಗೆಯೇ ಜನವರಿ 5 ರ ಒಳಗೆ ಸರ್ಕಾರ ಅರ್ಜಿಗೆ ಆಕ್ಷೇಪಣೆ ಸಲ್ಲಿಸಬೇಕು. ಇದಕ್ಕೆ ಮತ್ತಷ್ಟು ಕಾಲಾವಕಾಶ ನೀಡುವುದಿಲ್ಲ ಎಂದು ಗಡು ವಿಧಿಸಿ ವಿಚಾರಣೆಯನ್ನು ಜನವರಿ 6ಕ್ಕೆ ಮುಂದೂಡಿತು.

ABOUT THE AUTHOR

...view details