ಬೆಂಗಳೂರು : ರೂಪಾಂತರಿ ಕೊರೊನಾ ಸೋಂಕು ನಿಯಂತ್ರಿಸುವ ಸಲುವಾಗಿ ಬ್ರಿಟನ್‌ನಿಂದ ರಾಜ್ಯಕ್ಕೆ ಬಂದಿರುವ ಒಟ್ಟು 3,137 ಪ್ರಯಾಣಿಕರ ಪೈಕಿ 3,061 ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ ಎಂದು ಹೈಕೋರ್ಟ್‌ಗೆ ಸರ್ಕಾರ ಮಾಹಿತಿ ನೀಡಿದೆ.
ರಾಜ್ಯದಲ್ಲಿ ರೂಪಾಂತರಿ ಕೊರೊನಾ ಸೋಂಕು ನಿಯಂತ್ರಣಕ್ಕೆ ಅಗತ್ಯ ಕ್ರಮಕೈಗೊಳ್ಳಲು ಸರ್ಕಾರ ಹಾಗೂ ಬಿಬಿಎಂಪಿಗೆ ನಿರ್ದೇಶಿಸುವಂತೆ ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ, ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ನೇತೃತ್ವದ ವಿಭಾಗೀಯ ಪೀಠ ನಡೆಸಿತು.
ಸರ್ಕಾರದ ಪರ ವಕೀಲ ವಿಕ್ರಂ ಹುಯಿಲ್ಗೋಳ್ ಲಿಖಿತ ಹೇಳಿಕೆಯಲ್ಲಿ, ಡಿ. 2ರ ನಂತರ ಬ್ರಿಟನ್‌ನಿಂದ ರಾಜ್ಯಕ್ಕೆ ಒಟ್ಟು 3,137 ಪ್ರಯಾಣಿಕರು ಆಗಮಿಸಿದ್ದು, ಈ ಪೈಕಿ 3,061 ಪ್ರಯಾಣಿಕರನ್ನು ಪತ್ತೆ ಹಚ್ಚಲಾಗಿದೆ. ಇಂಗ್ಲೆಡ್‌ನಿಂದ ರಾಜ್ಯಕ್ಕೆ ಬಂದು ಹೊರ ರಾಜ್ಯಗಳಿಗೆ 594 ಪ್ರಯಾಣಿಕರು ತೆರಳಿದ್ದಾರೆ. ಅವರಲ್ಲಿ 75 ಜನರು ಈವರೆಗೆ ಪತ್ತೆಯಾಗಿಲ್ಲ ಎಂದು ತಿಳಿಸಿದರು.
ಓದಿ : ವೃದ್ಧಾಶ್ರಮದಲ್ಲಿ ಕನಿಷ್ಠ ಗುಣಮಟ್ಟ ಇರಬೇಕು: ಸರ್ಕಾರಕ್ಕೆ ಹೈಕೋರ್ಟ್ ನಿರ್ದೇಶನ
ಒಟ್ಟು 2,292 ಜನರಿಗೆ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲಾಗಿದೆ, 176 ಜನರ ಪರೀಕ್ಷಾ ಫಲಿತಾಂಶ ನಿರೀಕ್ಷೆಯಲ್ಲಿದೆ. ಒಟ್ಟು 34 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. 14 ಪ್ರಾಥಮಿಕ ಸಂಪರ್ಕದಲ್ಲಿ ಕೋವಿಡ್- 19 ಹಾಗೂ 9 ಜನರಲ್ಲಿ ರೂಪಾಂತರಿ ಸೋಂಕು ಪತ್ತೆಯಾಗಿದೆ ಎಂದು ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಪತ್ತೆಯಾಗಿರುವ 3,061 ಪ್ರಯಾಣಿಕರ ಪೈಕಿ 2,292 ಪ್ರಯಾಣಿಕರನ್ನು ಮಾತ್ರ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿದೆ. ಉಳಿದ 700ಕ್ಕೂ ಹೆಚ್ಚು ಪ್ರಯಾಣಿಕರಿಗೆ ಯಾಕೆ ಪರೀಕ್ಷೆ ನಡೆಸಿಲ್ಲ ಎಂದು ಪ್ರಶ್ನೆ ಮಾಡಿತು. ಈ ಕುರಿತು ಸ್ಪಷ್ಟನೆ ನೀಡುವಂತೆ ಸರ್ಕಾರಕ್ಕೆ ಸೂಚಿಸಿ ವಿಚಾರಣೆಯನ್ನು ಜ.12ಕ್ಕೆ ಮುಂದೂಡಿದೆ.
ಆರ್‌ಟಿಪಿಆರ್ ಪರೀಕ್ಷೆಯ ಫಲಿತಾಂಶವನ್ನು 48 ಗಂಟೆಗಳಿಗಿಂತ ವಿಳಂಬವಾಗಿ ನೀಡುವ ಮತ್ತು ಐಸಿಎಂಆರ್ ವೆಬ್‌ಪೋರ್ಟಲ್‌ನಲ್ಲಿ ವಿಳಂಬವಾಗಿ ನಮೂದಿಸುವ ಖಾಸಗಿ ಪ್ರಯೋಗಾಲಯಗಳಿಗೆ ಪರೀಕ್ಷೆಗೆ ತಗುಲಿರುವ ಮೊತ್ತದಲ್ಲಿ ಶೇ.10 ರಷ್ಟು ದಂಡ ವಿಧಿಸಬೇಕಾಗುತ್ತದೆ. ನಗರದ 7 ಖಾಸಗಿ ಪ್ರಯೋಗಾಲಯಗಳಲ್ಲಿ ಒಟ್ಟು 410 ಪ್ರಕರಣಗಳಲ್ಲಿ ಫಲಿತಾಂಶ ನೀಡುವಲ್ಲಿ ವಿಳಂಬವಾಗಿದೆ. ಅದಕ್ಕಾಗಿ ಅವುಗಳಿಗೆ ದಂಡ ವಿಧಿಸಲಾಗಿದೆ ಎಂದು ಬಿಬಿಎಂಪಿ ನ್ಯಾಯಾಲಯಕ್ಕೆ ಹೇಳಿತು.