ಬೆಂಗಳೂರು :ಉಡುಪಿಯ ಶಿರೂರು ಮಠಕ್ಕೆ ಆಪ್ರಾಪ್ತರನ್ನು ಮಠಾಧಿಪತಿಯನ್ನಾಗಿ ನೇಮಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿದೆ.
ಶಿರೂರು ಮಠಕ್ಕೆ ಅಪ್ರಾಪ್ತರ ನೇಮಕ ಪ್ರಶ್ನಿಸಿ ಅರ್ಜಿ: ವಿಚಾರಣೆ ಮುಂದೂಡಿದ ಹೈಕೋರ್ಟ್ - ಶಿರೂರು ಮಠಕ್ಕೆ ಅಪ್ರಾಪ್ತರ ನೇಮಕ ವಿವಾದ
ಶಿರೂರು ಮಠಕ್ಕೆ ಆಪ್ರಾಪ್ತರನ್ನು ಮಠಾಧಿಪತಿಯನ್ನಾಗಿ ನೇಮಿಸಿರುವ ಕ್ರಮ ಪ್ರಶ್ನಿಸಿ ಹೈಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೋರ್ಟ್ ಮುಂದೂಡಿದೆ.
ಶಿರೂರು ಮಠದ ಭಕ್ತ ಸಮಿತಿಯ ಕಾರ್ಯದರ್ಶಿ ಪಿ. ಲತವ್ಯ ಆಚಾರ್ಯ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಇಂದು ನ್ಯಾ. ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ, ವಿಚಾರಣೆಯನ್ನು ಒಂದು ವಾರ ಕಾಲ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಶಿರೂರು ಮಠಕ್ಕೆ ಪೀಠಾಧಿಪತಿಗಳನ್ನು ನೇಮಕ ಮಾಡುವ ವಿಚಾರದಲ್ಲಿ ಸೋದೆ ವಾದಿರಾಜ ಮಠದ ಪೀಠಾಪತಿ ವಿಶ್ವವಲ್ಲಭ ತೀರ್ಥ ಸ್ವಾಮೀಜಿ ಪ್ರಮುಖ ಪಾತ್ರ ವಹಿಸಿದ್ದಾರೆ. ಶಿರೂರು ಮಠದ ಆಡಳಿತ, ವ್ಯವಹಾರ ಮತ್ತು ಧಾರ್ಮಿಕ ವಿಚಾರಗಳಲ್ಲಿ ಭಾಗಿಯಾಗುವುದಕ್ಕಾಗಿ 16 ವರ್ಷದ ಅಪ್ರಾಪ್ತರನ್ನು ನೇಮಕ ಮಾಡಿದ್ದಾರೆ. ಇದು ಕಾನೂನು ಬಾಹಿರವಾಗಿದೆ. ಆದ್ದರಿಂದ ಈ ನೇಮಕ ಆದೇಶವನ್ನು ರದ್ದುಗೊಳಿಸಬೇಕು ಎಂದು ವಾದಿಸಿದರು.