ಬೆಂಗಳೂರು :ಸಾರಿಗೆ ಇಲಾಖೆ ಅಧಿಕಾರಿಗಳು ಡ್ರೈವಿಂಗ್ ಲೈಸೆನ್ಸ್ ಕೊಡುವ ಸಂದರ್ಭದಲ್ಲಿ ಚಾಲಕನ ಸಾಮರ್ಥ್ಯ ಪರೀಕ್ಷಿಸುವ ಸಂಬಂಧ ರೂಪಿಸಿರುವ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಆರೋಪಿಸಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ತನ್ನ ಪ್ರತಿಕ್ರಿಯೆ ತಿಳಿಸುವಂತೆ ಹೈಕೋರ್ಟ್ ಸೂಚಿಸಿದೆ.
ಡ್ರೈವಿಂಗ್ ಟೆಸ್ಟ್ ವೇಳೆ ಚಾಲಕನನ್ನು ಸರಿಯಾಗಿ ಪರೀಕ್ಷಿಸುತ್ತಿಲ್ಲ ಎಂದು ಆರೋಪಿಸಿ ಬೆಂಗಳೂರಿನ ಕಗ್ಗದಾಸಪುರ ನಿವಾಸಿ ಎಸ್. ಗೌರಿ ಶಂಕರ್ ಎಂಬುವರು ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ವಾದ ಆಲಿಸಿದ ಪೀಠ, ಅರ್ಜಿದಾರರು ಗಂಭೀರವಾದ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಕುರಿತು ಸರ್ಕಾರ ತನ್ನ ಪ್ರತಿಕ್ರಿಯೆ ತಿಳಿಸಬೇಕು ಎಂದು ಸೂಚಿಸಿ, ವಿಚಾರಣೆ ಮುಂದೂಡಿತು.
ಇದೇ ವೇಳೆ ಸಾರಿಗೆ ಇಲಾಖೆ ಅಧಿಕಾರಿಗಳು ಚಾಲನಾ ಪರವಾನಿಗೆ ನೀಡುವ ವೇಳೆ ಅಭ್ಯರ್ಥಿಗಳನ್ನು ಹೇಗೆ ಪರೀಕ್ಷಿಸುತ್ತಾರೆ ಎಂಬುದನ್ನು ತಿಳಿಯಲು ಏಜೆನ್ಸಿ ನೇಮಿಸುವ ಅಗತ್ಯವಿದೆ ಎಂದು ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿತು. ವಿಚಾರಣೆ ವೇಳೆ ಅರ್ಜಿದಾರರು ವಾದಿಸಿ, ಕೇಂದ್ರ ಮೋಟಾರು ವಾಹನ ನಿಯಮ-1989ರ ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ. ನಿಯಮ 15ರಡಿ 25 ಮಾರ್ಗಸೂಚಿಗಳಿದ್ದು, ಅವುಗಳ ಪ್ರಕಾರ, ಡಿಎಲ್ ಟೆಸ್ಟ್ ನಡೆಸುವ ವೇಳೆ ಚಾಲಕನ ಸಾಮರ್ಥ್ಯವನ್ನು ಕೂಲಂಕಷವಾಗಿ ಪರೀಕ್ಷಿಸಬೇಕು.