ಬೆಂಗಳೂರು: ರಂಗನತಿಟ್ಟು ಪಕ್ಷಿಧಾಮ ಸಮೀಪ ಹೆದ್ದಾರಿ ನಿರ್ಮಾಣ ಯೋಜನೆ ಪ್ರಶ್ನಿಸಿ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಯೋಜನೆ ಜಾರಿಗೆ ಹೊರಡಿಸಿರುವ ಆದೇಶ ಪ್ರಶ್ನಿಸಿ ಡಾಕ್ಟರ್ ಎಚ್. ಟಿ. ಚಂದ್ರಶೇಖರ್ ಮತ್ತಿತರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಕೆಲಕಾಲ ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ಪೀಠ ಪ್ರತಿವಾದಿಗಳಾದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮುಖ್ಯ ಪ್ರಧಾನ ವ್ಯವಸ್ಥಾಪಕ ಮತ್ತು ಯೋಜನೆ ನಿರ್ದೇಶಕ ಹಾಗೂ ಮೈಸೂರು ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ನೋಟಿಸ್ ಜಾರಿ ಮಾಡಿ ವಿಚಾರಣೆ ಮುಂದೂಡಿತು.
ಅರ್ಜಿದಾರರ ಕೋರಿಕೆ:
ರಂಗನತಿಟ್ಟು ಪಕ್ಷಿಧಾಮ ಸಮೀಪ ಹೆದ್ದಾರಿ ನಿರ್ಮಾಣ ಯೋಜನೆ ಪ್ರಶ್ನಿಸಿ ಪಿಐಎಲ್ - ಹೆದ್ದಾರಿ ನಿರ್ಮಾಣ
ರಂಗನತಿಟ್ಟು ಪಕ್ಷಿಧಾಮ ಸಮೀಪ ಹೆದ್ದಾರಿ ನಿರ್ಮಾಣ ಯೋಜನೆ ಸಂಬಂಧ ಸಲ್ಲಿಕೆಯಾಗಿದ್ದ ಪಿಐಎಲ್ ವಿಚಾರಣೆ ನಡೆಸಿದ ರಾಜ್ಯ ಹೈಕೋರ್ಟ್ ರಾಜ್ಯ ಸರ್ಕಾರ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ರಂಗನತಿಟ್ಟು ಪಕ್ಷಿಧಾಮ ಮತ್ತು ಅರಬಿತಿಟ್ಟು ವನ್ಯಜೀವಿ ಧಾಮ ಸಮೀಪ ಚತುಷ್ಪಥ ರಸ್ತೆ ನಿರ್ಮಾಣ ಹಾಗೂ ಹೆದ್ದಾರಿ ಅಗಲೀಕರಣ ಯೋಜನೆ ಕೈಗೊಳ್ಳಲಾಗಿದೆ. ಕಾಮಗಾರಿ ನಡೆಯುವ ಜಾಗವು ಕಾವೇರಿ ನದಿಗೆ ಅತ್ಯಂತ ಸಮೀಪದಲ್ಲಿದ್ದು, ಕಾಮಗಾರಿ ಮುಂದುವರಿದರೆ ಪಕ್ಷಿಧಾಮ ಮತ್ತು ವನ್ಯ ಜೀವಿ ಧಾಮದ ಜೀವಸಂಕುಲದ ಮೇಲೆ ತೀವ್ರ ಪರಿಣಾಮ ಬೀರಲಿದೆ. ಯೋಜನೆ ರೂಪಿಸುವ ಮುನ್ನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪರಿಸರದ ಮೇಲಾಗುವ ಪರಿಣಾಮಗಳ ಕುರಿತು ಯಾರೊಂದಿಗೂ ಚರ್ಚೆ ನಡೆಸಿಲ್ಲ. ಸಂಬಂಧಪಟ್ಟ ಇಲಾಖೆಗಳಿಂದ ಅನುಮತಿಯನ್ನೂ ಪಡೆದಿಲ್ಲ. ಆದ್ದರಿಂದ ಯೋಜನೆ ಜಾರಿಗೆ ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿದಾರರು ಮನವಿ ಮಾಡಿದ್ದಾರೆ. ಈಗಾಗಲೇ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು ಅದಕ್ಕೆ ತಡೆ ನೀಡಬೇಕು ಎಂದು ಕೋರಿದ್ದಾರೆ.