ಬೆಂಗಳೂರು: ಸದಾ ಟ್ರಾಫಿಕ್ ನಿಂದ ತುಂಬಿರುತ್ತಿದ್ದ ಕುಮಾರ ಕೃಪಾ ರಸ್ತೆ ಇಂದು ಕಲಾವಿದರ ಸಾವಿರಾರು ಚಿತ್ರಕಲೆಗಳಿಂದ ಕಂಗೊಳಿಸುತ್ತಿದೆ. ಸಿಎಂ ಸಿದ್ದರಾಮಯ್ಯ ಅವರು ಚಿತ್ರಕಲೆಗೆ ಕನ್ನಡದಲ್ಲಿ ಸಹಿ ಹಾಕುವುದರ ಮೂಲಕ ಚಿತ್ರಸಂತೆಗೆ ಅದ್ಧೂರಿ ಚಾಲನೆ ನೀಡಿದ್ದಾರೆ. ಚಿತ್ರಕಲಾ ಪರಿಷತ್ತಿಗೆ 50 ಲಕ್ಷ ರೂ. ಅನುದಾನವನ್ನು ಘೋಷಣೆ ಮಾಡುವುದರ ಜೊತೆಗೆ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಆರ್ಟ್ ಗ್ಯಾಲರಿ ಶುರು ಮಾಡುವುದರ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಚಿತ್ರಸಂತೆಯಲ್ಲಿ ಸಾವಿರಾರು ಚಿತ್ರಕಲೆಗಳು ಕಣ್ಮನ ಸೆಳೆಯುತ್ತಿವೆ. ನೋಡಲು ಬಂದ ಸಾವಿರಾರು ಜನ ಒಂದೆಡೆ ಆದರೆ ಇನ್ನೊಂದೆಡೆ ಸೆಲ್ಫಿ ಪ್ರಿಯರು ಚಿತ್ರಕಲೆಗಳ ಮುಂದೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದರು. ಒಟ್ಟಾರೆ ಸಂತೆ ನೋಡಲು ಬೆಂಗಳೂರು ಮಾತ್ರವಲ್ಲದೇ ದೇಶ, ವಿದೇಶದ ಜನರು ಬಂದಿರುವುದು ವಿಶೇಷವಾಗಿದೆ. ಕಲಾವಿದರು ಜಗತ್ತನ್ನು ನೂರೆಂಟು ಆಯಾಮಗಳಲ್ಲಿ ವಿಮರ್ಶಿಸುತ್ತಾರೆ. ಕೊನೆಗೆ ತಮ್ಮದೇ ಕಲ್ಪನೆಯನ್ನು ಬಣ್ಣಗಳ ಮೂಲಕ ಹಾಳೆಯಲ್ಲಿ ಬಿಡಿಸುತ್ತಾರೆ. ಇಂತಹ ಕಲಾವಿದರ ಕಲೆಗಳು ಕರ್ನಾಟಕ ಚಿತ್ರಕಲಾ ಪರಿಷತ್ 21ನೇ ಚಿತ್ರಸಂತೆಯಲ್ಲಿ ಪ್ರದರ್ಶಗೊಂಡವು.