ಬೆಂಗಳೂರು:ಕೊರೊನಾ ಲಾಕ್ಡೌನ್ ನಿಂದಮದುವೆ ಸೇರಿದಂತೆ ಬಹುತೇಕ ಎಲ್ಲಾ ಸಮಾರಂಭಗಳು ಸದ್ಯ ರದ್ದಾಗಿದ್ದು, ಫೋಟೋಗ್ರಫಿ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬಿದ್ದಿದೆ.
ಕೊರೊನಾದಿಂದಾಗಿ ಫೊಟೋಗ್ರಾಫರ್ ಹಾಗೂ ವಿಡಿಯೊಗ್ರಾಫರ್ ಗಳ ಬಿಸಿನೆಸ್‌ಗೂ ಹೊಡೆತ ಬಿದ್ದಿದೆ. ರಾಜ್ಯದಲ್ಲಿ ಅಂದಾಜು 10 ಸಾವಿರ ಫೋಟೋ ಸ್ಟುಡಿಯೋಗಳಿದ್ದು, ಈ ಪೈಕಿ ಬೆಂಗಳೂರಿನಲ್ಲಿಯೇ 3 ಸಾವಿರ ಸ್ಟುಡಿಯೋಗಳಿವೆ. ರಾಜ್ಯದ ಪ್ರತಿ ಜಿಲ್ಲಾ ಹಾಗೂ ತಾಲೂಕುವಾರು ಸಂಘ ನಿರ್ಮಿಸಿಕೊಂಡು ಫೋಟೋಗ್ರಾಫರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ.
ಸಾಮಾನ್ಯವಾಗಿ ಮಾರ್ಚ್‌ನಿಂದ ಮೇ ತಿಂಗಳವರೆಗೂ ಮದುವೆ, ನಾಮಕರಣ, ಉಪನಯನ ಸೇರಿದಂತೆ ಕಾರ್ಪೋರೇಟ್ ಕ್ಷೇತ್ರದ ಸಮಾರಂಭಗಳು ನಡೆಯುತ್ತವೆ. ಯಾವುದೇ ಸಭೆ ಸಮಾರಂಭಗಳು ನಡೆದರೆ ಫೋಟೊಗ್ರಾಫರ್ ಹಾಗೂ ವಿಡಿಯೋ ಗ್ರಾಫರ್‌ಗಳು ಇರಲೇಬೇಕು. ಒಂದು ವೇಳೆ, ಅವರು ಇಲ್ಲದಿದ್ದರೆ ಕಾರ್ಯಕ್ರಮ ಮುಗಿಯುವುದೇ ಇಲ್ಲ. ಡಿಜಿಟಲ್ ತಂತ್ರಜ್ಞಾನ ಬೆಳೆದಂತೆ ವಿಡಿಯೋಗ್ರಾಫರ್ ಹಾಗೂ ಫೋಟೊಗ್ರಾಫರ್‌ಗಳಿಗೆ ಡಿಮ್ಯಾಂಡ್ ಕಡಿಮೆಯಾಗುತ್ತಿದೆ. ಮೊಬೈಲ್ ಕಂಪನಿಗಳು ಉತ್ತಮ ಗುಣಮಟ್ಟದ ಕ್ಯಾಮರಾ ಸೌಲಭ್ಯಗಳಿಂದಾಗಿ ಗ್ರಾಹಕರು ಸಹ ಫೋಟೊಗಳಿಗಾಗಿ ಸ್ಟುಡಿಯೋಗಳಿಗೆ ಹೋಗದೆ ತಮ್ಮ ಮೊಬೈಲ್‌ಗಳಲ್ಲಿಯೇ ಸ್ಮರಣೀಯ ಕ್ಷಣಗಳನ್ನು ಸೆರೆಹಿಡಿಯುತ್ತಿದ್ದಾರೆ. ಇದು ಫೋಟೊಗ್ರಾಫ್ ಉದ್ಯಮಕ್ಕೆ ಮೊದಲೇ ಹೊಡೆತ ನೀಡಿತ್ತು.