ಬೆಂಗಳೂರು:ಆಡಳಿತ ಪಕ್ಷದ ಸದಸ್ಯರಾಗಿದ್ದುಕೊಂಡು ಬಹಿರಂಗವಾಗಿ ದೂರವಾಣಿ ಕದ್ದಾಲಿಕೆ ಆರೋಪ ಮಾಡಿದ್ದು ಸರಿಯಲ್ಲ, ಇಂತಹ ಹೇಳಿಕೆ ನೀಡುವಾಗ ಎಚ್ಚರಿಕೆ ವಹಿಸಬೇಕು ಎಂದು ಶಾಸಕ ಅರವಿಂದ ಬೆಲ್ಲದ್ಗೆ ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಬುದ್ಧಿವಾದ ಹೇಳಿದ್ದಾರೆ.
ರಾಜ್ಯ ಸರ್ಕಾರದಲ್ಲಿ ತಮ್ಮ ಫೋನ್ ಕದ್ದಾಲಿಕೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿರುವ ಶಾಸಕ ಅರವಿಂದ ಬೆಲ್ಲದ್ ಅವರನ್ನು ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ತಮ್ಮ ನಿವಾಸಕ್ಕೆ ಕರೆಸಿಕೊಂಡು ಚರ್ಚೆ ನಡೆಸಿದ್ದಾರೆ. ಈ ರೀತಿಯ ಗಂಭೀರ ಆರೋಪ ಮಾಡುವುದರಿಂದ ಪಕ್ಷ ಮತ್ತು ಸರ್ಕಾರದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಈ ರೀತಿಯ ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಬುದ್ಧಿವಾದ ಹೇಳಿದ್ದಾರೆ ಎಂದು ತಿಳಿದು ಬಂದಿದೆ.