ಕರ್ನಾಟಕ

karnataka

ಹಿಜಾಬ್ ತೀರ್ಪು ಪ್ರಶ್ನಿಸಿ ಸುಪ್ರೀಂಗೆ ಅರ್ಜಿ: ಹೀಗಿದೆ ಅರ್ಜಿದಾರರ ಮನವಿ

By

Published : Mar 16, 2022, 9:08 PM IST

ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಆಯೇಶಾ ಶಿಫಾತ್ ಹಾಗೂ ಮತ್ತೋರ್ವ ವಿದ್ಯಾರ್ಥಿನಿ ನಿಬಾನಾಜ್ ಎಂಬುವರು ಹೈಕೋರ್ಟ್ ಪೂರ್ಣಪೀಠದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದಾರೆ.

ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್

ಬೆಂಗಳೂರು:ಸಮವಸ್ತ್ರ ಸಂಹಿತೆ ಜಾರಿಗೊಳಿಸಿರುವ ಶಿಕ್ಷಣ ಸಂಸ್ಥೆಗಳ ಕ್ರಮ ಹಾಗೂ ಸಮವಸ್ತ್ರ ಸಂಹಿತೆ ಜಾರಿಗೆ ಸರ್ಕಾರ ಹೊರಡಿಸಿದ್ದ ಆದೇಶವನ್ನು ಪುರಸ್ಕರಿಸಿರುವ ಹೈಕೋರ್ಟ್ ತ್ರಿಸದಸ್ಯ ಪೀಠದ ತೀರ್ಪು ಪ್ರಶ್ನಿಸಿ, ರಾಜ್ಯದ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದಾರೆ.

ಉಡುಪಿ ಜಿಲ್ಲೆಯ ಕುಂದಾಪುರದ ಸರ್ಕಾರಿ ಪಿಯು ಕಾಲೇಜಿನ ಪ್ರಥಮ ಪಿಯು ವಿದ್ಯಾರ್ಥಿನಿ ಆಯೇಶಾ ಶಿಫಾತ್ ಹಾಗೂ ಮತ್ತೋರ್ವ ವಿದ್ಯಾರ್ಥಿನಿ ನಿಬಾನಾಜ್ ಎಂಬುವರು ಹೈಕೋರ್ಟ್ ಪೂರ್ಣಪೀಠದ ತೀರ್ಪು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಸ್ಪೆಷಲ್ ಲೀವ್ ಪಿಟಿಷನ್ ಸಲ್ಲಿಸಿದ್ದಾರೆ.

ಅರ್ಜಿದಾರರಾದ ನಿಬಾನಾಜ್ ಪರ ಇಂದು ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಪೀಠದಲ್ಲಿ ಹಾಜರಾದ ಹಿರಿಯ ವಕೀಲ ಸಂಜಯ್ ಹೆಗ್ಡೆ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸುವಂತೆ ಕೋರಿದ್ದಾರೆ.

ಪರೀಕ್ಷೆಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಅರ್ಜಿಯನ್ನು ತುರ್ತಾಗಿ ಪರಿಗಣಿಸಬೇಕು ಎಂಬ ಮನವಿ ಮಾಡಿದ್ದಾರೆ. ಕೋರಿಕೆಗೆ ಪ್ರತಿಕ್ರಿಯಿಸಿದ ಸಿಜೆಐ ಎನ್.ವಿ ರಮಣ ನೇತೃತ್ವದ ಪೀಠ ಸ್ವಲ್ಪ ಕಾಲಾವಕಾಶ ಕೊಡಿ ಪ್ರಕರಣವನ್ನು ಪರಿಶೀಲಿಸುತ್ತೇವೆ. ಹೋಳಿ ಹಬ್ಬದ ಬಳಿಕ ವಿಚಾರಣೆ ನಡೆಸೋಣ ಎಂದು ತಿಳಿಸಿದೆ.

ಅರ್ಜಿದಾರರ ಮನವಿಯಲ್ಲಿನ ಪ್ರಮುಖ ಅಂಶಗಳು:

  • ಕರ್ನಾಟಕ ಶಿಕ್ಷಣ ಕಾಯ್ದೆಯು ಕಾಲೇಜುಗಳಲ್ಲಿ ಸಮವಸ್ತ್ರವನ್ನು ಕಡ್ಡಾಯಗೊಳಿಸಿಲ್ಲ. ಇನ್ನು ರಾಜ್ಯ ಸರ್ಕಾರ ಕಡ್ಡಾಯ ಸಮವಸ್ತ್ರಕ್ಕೆ ಸಂಬಂಧಿಸಿದಂತೆ ಯಾವುದೇ ಕಾಯ್ದೆ ಅಥವಾ ನಿಯಮ ರೂಪಿಸಿಲ್ಲ. ಹೀಗಾಗಿ ಹಿಜಾಬ್ ಧರಿಸದಂತೆ ನಿರ್ಬಂಧಿಸಿರುವ ಕ್ರಮ ಮತ್ತು ಸಮವಸ್ತ್ರ ಸಂಹಿತೆ ಜಾರಿಗೆ ಸಂಬಂಧಿಸಿದಂತೆ ಸರ್ಕಾರ 2022ರ ಫೆಬ್ರವರಿ 5ರಂದು ಹೊರಡಿಸಿರುವ ಆದೇಶವೂ ನಿಯಮಬಾಹಿರ.
  • ಹಿಜಾಬ್ ಧರಿಸುವುದನ್ನು ಸಂವಿಧಾನದ ವಿಧಿ 25ರ ಅಡಿ ಆತ್ಮಸಾಕ್ಷಿಯ ಹಕ್ಕಿನಡಿ ರಕ್ಷಿಸಲಾಗಿದೆ. ಆತ್ಮಸಾಕ್ಷಿಯ ಹಕ್ಕು ವೈಯಕ್ತಿಕ ಹಕ್ಕಾಗಿದ್ದು ಇದರಲ್ಲಿ ಕಡ್ಡಾಯ ಧಾರ್ಮಿಕ ಆಚರಣೆ ಅಂಶವನ್ನು ಪರಿಗಣಿಸಿರುವುದು ಸರಿಯಾದ ಕ್ರಮವಲ್ಲ. ಜತೆಗೆ, ಈ ಅಂಶಗಳನ್ನು ಹೈಕೋರ್ಟ್ ತನ್ನ ತೀರ್ಪಿನಲ್ಲಿ ಪರಿಗಣಿಸಿಲ್ಲ.
  • ಭಾರತದ ಕಾನೂನು ವ್ಯವಸ್ಥೆಯಲ್ಲಿ ಧಾರ್ಮಿಕ ಸಂಕೇತದ ಉಡುಪು ಧರಿಸುವುದನ್ನು, ವಸ್ತುಗಳನ್ನು ಇಟ್ಟುಕೊಳ್ಳುವುದನ್ನು ಪರಿಗಣಿಸಲಾಗಿದೆ. ಸಿಖ್ ಸಮುದಾಯದವರು ತಲೆ ಮೇಲೆ ಪಗಡಿ (ಟರ್ಬನ್) ಧರಿಸುವುದರಿಂದಲೇ ಮೋಟರು ವಾಹನ ಕಾಯ್ದೆ-1988ರ ಸೆಕ್ಷನ್ 129ರ ಅಡಿ ಸಿಖ್ ಸಮುದಾಯದವರಿಗೆ ಹೆಲ್ಮೆಟ್ ಧರಿಸುವುದರಿಂದ ವಿನಾಯ್ತಿ ನೀಡಲಾಗಿದೆ. ಇನ್ನು ಸಿಖ್ ಸಮುದಾಯದವರು ಕಿರ್ಪಾನ್ (ಚಿಕ್ಕ ಕತ್ತಿ) ಜತೆಗಿರಿಸಿಕೊಂಡು ವಿಮಾನಗಳಲ್ಲಿ ಪ್ರಯಾಣಿಸಲು ನಾಗರಿಕ ವಿಮಾನಯಾನ ಸಚಿವಾಲಯ ಸಮ್ಮತಿಸಿದೆ.
  • ಮುಸ್ಲಿಂ ಮಹಿಳೆಯರು ಹಿಜಾಬ್ ಧರಿಸುವುದು ಸಂವಿಧಾನದ ವಿಧಿ 21ರ ಅಡಿ ನೀಡಿರುವ ಖಾಸಗಿ ಹಕ್ಕು ಹಾಗೂ ವಿಧಿ 19(1)(ಎ) ಅಡಿ ಲಭ್ಯವಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಾಗಿದೆ. ಈ ಅಂಶಗಳನ್ನು ಪರಿಗಣಿಸುವಲ್ಲಿ ಹೈಕೋರ್ಟ್ ವಿಫಲವಾಗಿದೆ.
  • ಜಾತ್ಯಾತೀತತೆ, ಸಮಾನತೆ ಹಾಗೂ ಸಾರ್ವಜನಿಕ ಸುವ್ಯವಸ್ಥೆ ಜಾರಿ ನೆಪದಲ್ಲಿ ಸಮವಸ್ತ್ರ ಸಂಹಿತೆ ಜಾರಿಗೊಳಿಸುವ ಮೂಲಕ ಇಸ್ಲಾಂ ಅನುಯಾಯಿಗಳ ನಂಬಿಕೆ ಮೇಲೆ ದಾಳಿ ನಡೆಸುವ ಉದ್ದೇಶದಿಂದ ಸರ್ಕಾರ ಫೆಬ್ರವರಿ 5ರಂದು ಇಂತಹ ಆದೇಶ ಹೊರಡಿಸಿದೆ.
  • ಇದರ ಅನುಸಾರ ಹಿಜಾಬ್ ಧರಿಸಿ ಬರುವ ಮುಸ್ಲಿಂ ವಿದ್ಯಾರ್ಥಿನಿಯರನ್ನು ಕಾಲೇಜಿನಿಂದ ಹೊರಗಿಡಲಾಗಿದೆ. ಸರ್ಕಾರ ಧಾರ್ಮಿಕ ನಂಬಿಕೆಯನ್ನು ಅನುಸರಿಸಲು ಅವಕಾಶ ನೀಡದೇ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಈ ಅಂಶಗಳನ್ನು ಹೈಕೋರ್ಟ್ ಪರಿಗಣಿಸಿಲ್ಲ ಎಂದು ಅರ್ಜಿದಾರರು ಆರೋಪಿಸಿದ್ದಾರೆ.

TAGGED:

ABOUT THE AUTHOR

...view details