ಬೆಂಗಳೂರು :ರಾಜ್ಯದ ಕಾರಾಗೃಹಗಳಲ್ಲಿ ಕೊರೊನಾ ಸೋಂಕು ನಿರ್ವಹಣೆ ಸರಿಯಿಲ್ಲ ಎಂದು ಆರೋಪಿಸಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದು, ಈ ಸಂಬಂಧ ವಿವರಣೆ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಪ್ರಸ್ತುತ ತಾನು ಇರುವ ಮೈಸೂರು ಕೇಂದ್ರ ಕಾರಾಗೃಹದಲ್ಲಿ ಕೊರೊನಾ ಸೋಂಕು ನಿರ್ವಹಣೆ ಸೂಕ್ತ ರೀತಿಯಲ್ಲಿ ಇಲ್ಲ ಎಂದು ಆರೋಪಿಸಿ ಅಮೋಲ್ ಕಾಳೆ ಸಲ್ಲಿಸಿರುವ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು. ಕೆಲ ಕಾಲ ಅರ್ಜಿದಾರರ ಪರ ವಕೀಲ ಎನ್.ಪಿ ಅಮೃತೇಶ್ ಅವರ ವಾದ ಆಲಿಸಿದ ಪೀಠ, ರಾಜ್ಯದ ಕಾರಾಗೃಹಗಳಲ್ಲಿ ಕೊರೊನಾ ನಿರ್ವಹಣೆ ಹೇಗಿದೆ ಎಂಬುದರ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿ, ವಿಚಾರಣೆಯನ್ನು ಸೆಪ್ಟೆಂಬರ್ 23ಕ್ಕೆ ಮುಂದೂಡಿತು.
ಹೈಕೋರ್ಟ್ ಕೇಳಿರುವ ವಿವರ :
- ರಾಜ್ಯದ ಎಲ್ಲ ಕಾರಾಗೃಹಗಳಲ್ಲಿರುವ ಕೊರೊನಾ ಸೋಂಕಿತ ಕೈದಿಗಳ ಸಂಖ್ಯೆ
- ಸೋಂಕಿತರಿಗೆ ಚಿಕಿತ್ಸೆ ನೀಡಲು ಇರುವ ಸೌಲಭ್ಯಗಳು
- ಜೈಲುಗಳಲ್ಲಿ ಐಸೋಲೇಷನ್ಗೆ ಇರುವ ವ್ಯವಸ್ಥೆ
- ಕೈದಿಗಳಿಗೆ ಕೊರೊನಾ ಪರೀಕ್ಷೆ ನಡೆಸುತ್ತಿರುವ ಪ್ರಕ್ರಿಯೆ
- ವಿಚಾರಣಾಧೀನ ಕೈದಿಗಳಿಗೆ ಇರುವ ಕೊರೊನಾ ಸಂಬಂಧಿತ ಮಾರ್ಗಸೂಚಿಗಳು
- ಕೈದಿಗಳನ್ನು ಕ್ವಾರಂಟೈನ್ಗೆ ಒಳಪಡಿಸಲು ಇರುವ ಸೌಲಭ್ಯಗಳು
- ಕೊರೊನಾ ನಿರ್ವಹಣೆ ಮತ್ತು ಚಿಕಿತ್ಸೆಗೆ ಇರುವ ಇತರೆ ಸೌಲಭ್ಯಗಳು