ಬೆಂಗಳೂರು: ಭೂಮಿ ಮಾರಾಟ ಮಾಡಿ ನಾಲ್ಕೂವರೆ ದಶಕಗಳು ಕಳೆದ ಬಳಿಕವೂ ಅದರ ಮೇಲಿನ ಹಕ್ಕು ಸಾಧಿಸುವುದಕ್ಕಾಗಿ ಪ್ರಕರಣ ದಾಖಲಿಸಿದ್ದ ಅರ್ಜಿ ರದ್ದುಗೊಳಿಸಿರುವ ಹೈಕೋರ್ಟ್, ಅರ್ಜಿದಾರರಿಗೆ 20 ಸಾವಿರ ರೂಪಾಯಿ ದಂಡ ವಿಧಿಸಿದೆ.
ತಮ್ಮ ಭೂಮಿಯ ಸ್ವಾಧೀನ ಸಂಬಂಧ 1980ರ ಸೆಪ್ಟೆಂಬರ್ 30ರಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ ಸೆಕ್ಷನ್ 19 (1)ರ ಹೊರಡಿಸಿದ್ದ ಅಂತಿಮ ಅಧಿಸೂಚನೆಯನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಜೀವನಹಳ್ಳಿಯ ಎ.ರಾಮಮೂರ್ತಿ, ಎ.ಅಶ್ವಥ್ಮೂರ್ತಿ ಮತ್ತು ಕೆ.ಉಮಾಶಂಕರ್ ಎಂಬುವರು ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ನ್ಯಾಯಪೀಠ ಅರ್ಜಿ ವಿಚಾರಣೆ ನಡೆಸಿತು.
ಭೂಸ್ವಾಧೀನ, ಪುನರ್ವಸತಿ, ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆ ಕಾಯಿದೆಯ ಸೆಕ್ಷನ್ 24 (2) ರದ್ದಾಗಿರುವುದರಿಂದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆಯ ಅಡಿ 1980ರಲ್ಲಿ ಹೊರಡಿಸಿರುವ ಅಂತಿಮ ಅಧಿಸೂಚನೆ ರದ್ದತಿ ಕೋರಿದ್ದ ಅರ್ಜಿಯನ್ನು ನ್ಯಾಯಾಲಯವು ತಿರಸ್ಕರಿಸಿದೆ. ಭೂಮಿಯನ್ನು ವಿಳಂಬವಾಗಿ ಪರಿವರ್ತಿಸಿ, ಹಲವು ಮನೆ ನಿರ್ಮಿಸಿದ್ದು, ಸೈಟ್ ಪಡದಿರುವವರು ಸಲ್ಲಿಸಿರುವ ಮಧ್ಯಪ್ರವೇಶ ಅರ್ಜಿಗೆ ಅರ್ಜಿದಾರರು ಆಕ್ಷೇಪಣೆ ಸಲ್ಲಿಸಿಲ್ಲ. 94 ಕೊಳಗೇರಿ ನಿವಾಸಿಗಳಿಗೆ ಭೂಮಿಯ ಮಾಲೀಕರು ನಿವೇಶನ ಹಂಚಿಕೆ ಮಾಡುವ ವಿವಾದ ರಹಿತವಾಗಿತ್ತು.
ಅದಾಗ್ಯೂ, ಆಕ್ಷೇಪಾರ್ಹವಾದ ಭೂಮಿಯು ತಮ್ಮ ವಶದಲ್ಲಿದೆ ಎಂದು ಅರ್ಜಿದಾರರು ಹೇಳುತ್ತಿರುವುದು ನ್ಯಾಯಾಲಯಕ್ಕೆ ಹೇಳುತ್ತಿರುವ ಸುಳ್ಳಲ್ಲದೇ ಬೇರೇನು ಅಲ್ಲ ಎಂದು ಪೀಠವು ಆದೇಶದಲ್ಲಿ ಹೇಳಿದೆ. ನಾಲ್ಕು ದಶಕಗಳ ಹಿಂದೆಯೇ ಆಕ್ಷೇಪಾರ್ಹವಾದ ಭೂಮಿ ವಶಪಡಿಸಿಕೊಂಡು ಅದನ್ನು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ವಹಿಸಲಾಗಿದೆ. ಇದು ಲೇಔಟ್ ಅಭಿವೃದ್ಧಿಪಡಿಸಿ, ಸಮಾಜದ ಕೆಳ ಸ್ಥಳದಲ್ಲಿರುವ ಸಮುದಾಯ 138 ಮಂದಿಗೆ ಇಲ್ಲಿ ನಿವೇಶನ/ಮನೆ ಹಂಚಿಕೆ ಮಾಡಿದೆ.