ಬೆಂಗಳೂರು: ಉಡುಪಿಯ ಅಷ್ಟಮಠಗಳಲ್ಲಿ ಪರ್ಯಾಯ ಮಹೋತ್ಸವಕ್ಕೆ ಮಾರ್ಗಸೂಚಿಗಳು ಅಥವಾ ಬೈಲಾ ರಚನೆಗೆ ಸಂಬಂಧಿಸಿದಂತೆ ಸಮಿತಿ ರಚನೆ ಮಾಡುವಂತೆ ಕೋರಿ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್ ನಿರಾಕರಿಸಿದೆ.
ಉಡುಪಿ ಮಠದ ಭಕ್ತರಾಗಿರುವ ಬೆಂಗಳೂರಿನ ಗುರುರಾಜ್ ಜೀವನ ರಾವ್ ಎಂಬುವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯನ್ಯಾಯಮೂರ್ತಿ ಪ್ರಸನ್ನ ಬಾಲಚಂದ್ರ ವರಾಳೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಅರ್ಜಿ ವಜಾಗೊಳಿಸಿ ಆದೇಶಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಸಾಗರದಾಜೆ ಪ್ರಯಾಣ ಮಾಡುವವರು ಪರ್ಯಾಯ ಮಹೋತ್ಸವದಲ್ಲಿ ಭಾಗಿಯಾಗಲು ಅವಕಾಶ ನೀಡದಂತೆ ಕೋರಿದರು. ಈ ವೇಳೆ ಮಧ್ಯ ಪ್ರವೇಶಿಸಿದ ನ್ಯಾಯಪೀಠ, ಜ್ಞಾನದ ಸಂಪಾದನೆಗಾಗಿ ವಿದೇಶಿ ಪ್ರವೇಶ ಮಾಡಿದರೆ ತಪ್ಪೇನು. ಭೌದ್ಧ ಧರ್ಮ ಪ್ರಚಾರಕ್ಕೆ ಆಶೋಕ ಚಕ್ರವರ್ತಿ ತನ್ನ ಮಕ್ಕಳಾದ ಮಹೇಂದ್ರ ಮತ್ತು ಸಂಘಮಿತ್ರ ಅವರನ್ನು ಶ್ರೀಲಂಕಾಕ್ಕೆ ಕಳುಹಿಸಿದ್ದರು. ಶಂಕರಾಚಾರ್ಯ ಅವರು ಸಾಗರವನ್ನು ದಾಟಿ ಇಡೀ ದೇಶವನ್ನು ಸುತ್ತಾಡಿದ್ದರು. ಮುಕ್ತ ಮನಸ್ಸಿನಿಂದ ಹೊರದೇಶಗಳಿಗೆ ಆಧ್ಯಾತ್ಮಿಕ ಜ್ಞಾನ ಪಡೆದುಕೊಳ್ಳುವುದರಲ್ಲಿ ತಪ್ಪೇನು. ಅದಕ್ಕೆ ನಾವು ನಿರ್ಬಂಧ ವಿಧಿಸುವುದಕ್ಕೆ ಅವಕಾಶವಿದೆಯೇ ಎಂದು ಪ್ರಶ್ನಿಸಿತು.