ಬೆಂಗಳೂರು: ಕೊರೊನಾ ಸೋಂಕಿನ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಬಿಪಿಎಲ್ ಹಾಗೂ ಎಪಿಎಲ್ ವರ್ಗಗಳಿಗೆ ಚಿಕಿತ್ಸಾ ವೆಚ್ಚದ ದರ ನಿಗದಿಪಡಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಲು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಕೊರೊನಾ ಸೋಂಕಿಗೆ ಚಿಕಿತ್ಸಾ ವೆಚ್ಚ ನಿಗದಿ ಕೋರಿ ಹೈಕೋರ್ಟ್ಗೆ ಅರ್ಜಿ
ಕೊರೊನಾ ತಪಾಸಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಬಿಪಿಎಲ್ ಹಾಗೂ ಎಪಿಎಲ್ ವರ್ಗಗಳಿಗೆ ಚಿಕಿತ್ಸಾ ವೆಚ್ಚ ನಿಗದಿ ಪಡಿಸುವಂತೆ ಮತ್ತು ಪಿಪಿಇ ಕಿಟ್, ಮಾಸ್ಕ್ ದರ ನಿಗದಿ ಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕೆಂದು ಕೋರಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಲಾಗಿದೆ.
ಪಿಪಿಇ ಕಿಟ್ಗಳ ಗುಣಮಟ್ಟ ಹಾಗೂ ಸಮರ್ಪಕ ಪೂರೈಕೆ ವಿಷಯಕ್ಕೆ ಸಂಬಂಧಿಸಿದಂತೆ ಡಾ. ರಾಜೀವ್ ಗೋಥೆ ಎಂಬುವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಪೂರಕವಾಗಿ ಈ ಮಧ್ಯಂತರ ಅರ್ಜಿ ಸಲ್ಲಿಸಲಾಗಿದೆ. ಅರ್ಜಿಯಲ್ಲಿ ಪಿಪಿಇ ಕಿಟ್, ಮಾಸ್ಕ್ ದರ ನಿಗದಿಪಡಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು. ಅವುಗಳ ಖರೀದಿಯನ್ನು ಸಾರ್ವಜನಿಕ ಸಂಗ್ರಹಣೆ ಪಾರದರ್ಶಕ ಕಾಯ್ದೆ ವ್ಯಾಪ್ತಿಗೆ ಒಳಪಡಿಸಬೇಕು. ಈ ವಸ್ತುಗಳನ್ನು ಅಕ್ರಮ ದಾಸ್ತಾನು ಮಾಡಿ ಕೃತಕ ಅಭಾವ ಸೃಷ್ಟಿಸಿದವರ ವಿರುದ್ಧ ಕ್ರಮಕೈಗೊಳ್ಳಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿದ್ದಾರೆ.
ಅಲ್ಲದೇ ಕೊರೊನಾ ಸೋಂಕು ನಿಯಂತ್ರಣ ಮತ್ತು ಚಿಕಿತ್ಸೆಯಲ್ಲಿ ತೊಡಗಿಸಿಕೊಂಡಿರುವ ವೈದ್ಯರು, ಆರೋಗ್ಯ ಕಾರ್ಯಕರ್ತರು, ಅರೆ ವೈದ್ಯಕೀಯ ಸಿಬ್ಬಂದಿಗೆ ಮಾರ್ಗದರ್ಶನ ನೀಡಲು ಹಿರಿಯ ವೈದ್ಯರನ್ನು ನಿಯೋಜಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು. ತಪಾಸಣಾ ಪ್ರಯೋಗಾಲಯಗಳ ಕಾರ್ಯಕ್ಷಮತೆ ಹೆಚ್ಚಿಸಬೇಕು. ಹೆದ್ದಾರಿ ಮತ್ತು ರಾಜ್ಯದ ಗಡಿಭಾಗದಲ್ಲಿ ಕರ್ತವ್ಯದಲ್ಲಿ ತೊಡಗಿಸಿಕೊಂಡಿರುವ ಅರೆ ವೈದ್ಯಕೀಯ ಸಿಬ್ಬಂದಿಯ ಕೆಲಸದ ಅವಧಿ ಮತ್ತು ಸವಲತ್ತುಗಳನ್ನು ಸುಧಾರಿಸುವಂತೆ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.