ಬೆಂಗಳೂರು :ಪ್ರತಿಷ್ಠಿತ ಸಾಮಾಜಿಕ ಜಾಲತಾಣ ಟ್ವಿಟರ್ ವೇದಿಕೆಯಿಂದ ತೆಗೆದುಹಾಕಿದ್ದ ಖಾತೆಗಳಲ್ಲಿರುವ ಟ್ವೀಟ್ ಸಂದೇಶಗಳನ್ನು ಮುಚ್ಚಿದ ಲಕೋಟೆಯಲ್ಲಿ ಹೈಕೋರ್ಟ್ಗೆ ಸಲ್ಲಿಸಲಾಗಿದ್ದು, ಈ ಮಾಹಿತಿಯನ್ನು ಹೈಕೋರ್ಟ್ ಪರಿಶೀಲನೆ ನಡೆಸಿದೆ.
ಕೆಲವು ಟ್ವಿಟರ್ ಖಾತೆಗಳನ್ನು ರದ್ದು ಪಡಿಸುವಂತೆ ಕೇಂದ್ರ ಮಾಹಿತಿ ತಂತ್ರಜಾನ ಮತ್ತು ಎಲೆಕ್ಟ್ರಾನಿಕ್ಸ್ ಸಚಿವಾಲಯ ನೀಡಿದ್ದ ನೋಟಿಸ್ ಪ್ರಶ್ನಿಸಿ ಟ್ವಿಟರ್ ಕಂಪೆನಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾ.ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠ, ಕೇಂದ್ರ ಸರ್ಕಾರ ಮತ್ತು ಅರ್ಜಿದಾರರ ಪರ ವಕೀಲರು ರದ್ದು ಮಾಡಿದ್ದ ಖಾತೆಗಳಲ್ಲಿನ ಮಾಹಿತಿಯುಳ್ಳ ದಾಖಲೆಯನ್ನು ನ್ಯಾಯಪೀಠಕ್ಕೆ ಸಲ್ಲಿಸಿದರು. ಸಂಪೂರ್ಣ ಮಾಹಿತಿಯನ್ನು ಪರಿಶೀಲನೆ ನಡೆಸಿ ನ್ಯಾಯಪೀಠ, ಬಳಿಕ ದಾಖಲೆಗಳನ್ನು ಮತ್ತೆ ಮುಚ್ಚಿದ ಲಕೋಟೆಯಲ್ಲಿ ಇಡಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.
ಸಾಮಾಜಿಕ ಜಾಲತಾಣಗಳ ನಿರ್ವಹಣೆಯ ವಿವರಣೆ ಸಲ್ಲಿಕೆ : ಹಿರಿಯ ವಕೀಲ ಅರವಿಂದ ದತ್ತಾರ ವಾದ ಮಂಡಿಸಿ, ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ವಿವಿಧ ದೇಶಗಳಲ್ಲಿ ಸಾಮಾಜಿಕ ಜಾಲತಾಣಗಳ ನಿರ್ವಹಣೆ ಕುರಿತಂತೆ ಸುಮಾರು 300 ಪುಟಗಳ ವಿವರಣೆ ಸಲ್ಲಿಸಿದ್ದರು. ಅಲ್ಲದೆ, ಅಮೆರಿಕಾದಲ್ಲಿ ಯಾವುದೇ ವ್ಯಕ್ತಿಯನ್ನು ತಾನು ದಾಖಲಿಸಿರುವ ಯಾವೊಂದು ಅಂಶವನ್ನು ತೆಗೆಯುವಂತೆ ಸೂಚನೆ ನೀಡುವುದಿಲ್ಲ.
ಆಸ್ಟ್ರೇಲಿಯಾದಲ್ಲಿ ಸುರಕ್ಷತಾ ಆಯುಕ್ತರು ಟ್ವಿಟರ್ ಅಂಶಗಳನ್ನು ತೆಗೆದು ಹಾಕುವುದಕ್ಕೆ ನೋಟಿಸ್ ನೀಡುವ ಪ್ರಕ್ರಿಯೆ ಇದೆ. ಆದರೆ, ಅದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶವಿರಲಿದೆ ಎಂದು ಹೇಳಿದರು. ಭಾರತದಲ್ಲಿ ಮಾಹಿತಿ ತಂತ್ರಜ್ಞಾನ ಕಾಯಿದೆ ಪ್ರಕಾರ ಖಾತೆಗಳನ್ನು ರದ್ದು ಮಾಡಬಹುದಾಗಿದೆ. ಅದನ್ನು ಪ್ರಶ್ನೆ ಮಾಡುವುದಕ್ಕೆ ಅವಕಾಶ ನೀಡಲಾಗಿಲ್ಲ. ಹೀಗಾಗಿ ನ್ಯಾಯಾಲಯದ ಮೊರೆ ಹೋಗಬೇಕಾಗಿದೆ ಎಂದು ವಿವರಿಸಿದರು.
ಖಾತೆಯನ್ನೇ ರದ್ದು ಮಾಡುವುದರಲ್ಲಿ ಅರ್ಥವಿಲ್ಲ: ಟ್ವಿಟರ್ ಪರ ವಾದಿಸಿದ ಮತ್ತೊಬ್ಬ ಹಿರಿಯ ನ್ಯಾಯವಾದಿ ಅಶೋಕ್ ಹಾರನಹಳ್ಳಿ, ಶ್ರೇಯಾ ಸಿಂಗಾಲ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಯಾವುದೇ ಮಾರ್ಗಸೂಚಿಗಳನ್ನು ಅನುಸರಿಸದೆ ಖಾತೆಗಳನ್ನು ರದ್ದು ಮಾಡುವುದಕ್ಕೆ ಕೇಂದ್ರ ಸರ್ಕಾರ ಸೂಚನೆ ನೀಡಲಾಗಿದೆ. ಇದು ಮಧ್ಯವರ್ತಿದಾರರಾಗಿರುವ ಟ್ವಿಟರ್ ಸಂಸ್ಥೆಯ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ವಿವರಿಸಿದರು. ಗೊಂದಲಕರವಾಗಿರುವ ಟ್ವೀಟ್ಗಳನ್ನು ನಿರ್ಬಂಧಿಸಿದರೆ ತಪ್ಪಿಲ್ಲ. ಆದರೆ, ಖಾತೆಯನ್ನೇ ರದ್ದು ಮಾಡುವುದರಲ್ಲಿ ಅರ್ಥವಿಲ್ಲ. ಒಬ್ಬ ಲೇಖಕರ ಪುಸ್ತಕವನ್ನು ಬಂದ್ ಮಾಡಬಹುದಾಗಿದೆ. ಲೇಖಕರನ್ನೇ ಬಂದ್ ಮಾಡುವುದಕ್ಕೆ ಸಾಧ್ಯವೇ ಎಂದು ಅವರು ಪ್ರಶ್ನಿಸಿದರು.
ಒಂದು ಖಾತೆದಾರರಿಗೆ ಸಾವಿರಾರು ಜನ ಫಾಲೋವರ್ಸ್ ಇರಬಹುದು. ಆದರೆ, ಅವರ ಖಾತೆಯನ್ನು ಬಂದ್ ಮಾಡಿದಲ್ಲಿ ಅವರೆಲ್ಲರನ್ನೂ ಆತ ಕಳೆದುಕೊಳ್ಳಬೇಕಾಗುತ್ತದೆ. ಬಳಿಕ ಹೊಸ ಖಾತೆ ಮಾಡಿದರೆ ಅವರನ್ನು ಪಡೆಯಲು ಸಾಕಷ್ಟು ಪ್ರಯತ್ನ ಬೇಕಾಗುತ್ತದೆ ಎಂದು ವಾದಿಸಿದರು.
ಟ್ವಿಟರ್ ಸಂಸ್ಥೆಗೆ ದೊಡ್ಡ ತೊಂದರೆ: ಯಾವುದೇ ಕಾರಣಗಳನ್ನು ನೀಡದೆ ಖಾಸಗಿ ವ್ಯಕ್ತಿಗಳ ಖಾತೆಗಳನ್ನು ರದ್ದು ಮಾಡುತ್ತಾ ಹೋದಲ್ಲಿ ಟ್ವಿಟರ್ ಸಂಸ್ಥೆಗೆ ದೊಡ್ಡ ತೊಂದರೆಯಾಗಲಿದೆ ಎಂದು ಅವರು ನ್ಯಾಯಪೀಠಕ್ಕೆ ವಿವರಣೆ ನೀಡಿ ಕೇಂದ್ರ ಸರ್ಕಾರದ ನೋಟಿಸ್ ರದ್ದು ಮಾಡಬೇಕು ಎಂದು ನ್ಯಾಯಪೀಠಕ್ಕೆ ಮನವಿ ಮಾಡಿದರು.
ಮಧ್ಯಂತರ ಅರ್ಜಿ ವಜಾ : ಹಿರಿಯ ವಕೀಲ ಸಂಜಯ್ ಹೆಗ್ಡೆ ಅವರ ಖಾತೆ ರದ್ದು ಮಾಡಿರುವ ಸಂಬಂಧ ಹಿರಿಯ ವಕೀಲ ಆದಿತ್ಯ ಸೋಂದಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು ಹೈಕೋರ್ಟ್ ರದ್ದುಪಡಿಸಿತು. ಸಂಜಯ್ ಹೆಗ್ಡೆ ಅವರ ಖಾತೆ ರದ್ದು ಪಡಿಸಿರುವ ಸಂಬಂಧ ಈಗಾಗಲೇ ದೆಹಲಿ ಹೈಕೋರ್ಟ್ನಲ್ಲಿ ವಿಚಾರಣೆ ನಡೆಯುತ್ತಿದೆ. ಹೀಗಿರುವಾಗ ಮತ್ತೆ ಅರ್ಜಿಯ ವಿಚಾರಣೆ ನಡೆಸುವ ಅಗತ್ಯವಿಲ್ಲ ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟು ಅರ್ಜಿ ವಜಾಗೊಳಿಸಿ ಆದೇಶಿಸಿತು.
ಇದನ್ನೂ ಓದಿ :ಹಸಿರು ಪಟಾಕಿಗಷ್ಟೇ ಅವಕಾಶ: ಆದೇಶ ಮೀರಿದ್ರೆ ಮುಲಾಜಿಲ್ಲದೆ ಜಪ್ತಿ